ಭಾರತ – ಪಾಕ್‌ ಗಡಿಯಲ್ಲಿರೋ 4 ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್

Public TV
2 Min Read
Mock drill 1

ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಾದ ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಸಂಜೆ ಮಾಕ್‌ ಡ್ರಿಲ್ ನಡೆಯಲಿದೆ. ಜನರಿಗೆ ಯುದ್ಧ ಸಂದರ್ಭದ ಬಗ್ಗೆ ಜಾಗೃತಿ ಮೂಡಿಸಲು ಮಾಕ್‌ ಡ್ರಿಲ್‌ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯುದ್ಧದ (War) ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಕ್‌ ಡ್ರಿಲ್‌ ವೇಳೆ ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿಗಳು, ನಾಗರಿಕರಿಗೆ ಸೇನೆ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ನೀಡಲಿದ್ದಾರೆ.

Indian Army Mock Drill

ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಇತ್ತೀಚೆಗೆ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಅದರಂತೆ ಬಹುತೇಕ ರಾಜ್ಯಗಳಲ್ಲಿ ಮಾಕ್‌ ಡ್ರಿಲ್ ನಡೆದಿತ್ತು.

ಮಾಕ್ ಡ್ರಿಲ್ ಎಂದರೇನು?
ಮಾಕ್ ಡ್ರಿಲ್ ವೇಳೆ, ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.

Mock Drill

ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.

ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಈ ರೀತಿಯ ಮಾಕ್‌ ಡ್ರಿಲ್‌ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್‌ ಡ್ರಿಲ್‌ ಮಾಡಲು ಸಮಯ ಸಿಕ್ಕಿರಲಿಲ್ಲ.

ಆಪರೇಷನ್ ಸಿಂಧೂರ
ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದ ಪ್ರತೀಕಾರವಾಗಿ ಮೇ 6 ಮತ್ತು 7ರ ರಾತ್ರಿ ಭಾರತೀಯ ಸೇನೆಯ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಹಲವು ಪ್ರಮುಖ ಭಯೋತ್ಪಾಕರನ್ನು ಹತ್ಯೆ ಮಾಡಿತ್ತು.

ಕಾರ್ಯಾಚರಣೆಯಲ್ಲಿ ಮುರಿದಿಕೆಯಲ್ಲಿನ ಲಷ್ಕರ್ ಪ್ರಧಾನ ಕಚೇರಿಯಲ್ಲೇ ಇದ್ದ ಅತೀ ಹೆಚ್ಚು ಉಗ್ರರ ಹತ್ಯೆಯಾಗಿದ್ದು, ವಿಮಾನ ಹೈಜಾಕ್‌ ಮಾಡಿದ್ದ ಯೂಸುಫ್ ಅಜರ್, ಅಬು ಜುಂದಾಲ್ @ ಮುದಸ್ಸರ್ ಸೇರಿ 140 ಉಗ್ರರು ಬಲಿಯಾಗಿದ್ದರು. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಮೇ 10 ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದ ಬಳಿಕ ಉದ್ವಿಗ್ನತೆ ಕಡಿಮೆಯಾಗಿತ್ತು.

Share This Article