ಮಂಡ್ಯ: ಟ್ರಾಫಿಕ್ ಪೊಲೀಸರ (Traffic Police) ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಪ್ರಾಣಬಿಟ್ಟ ದಾರುಣ ಘಟನೆ ಮಂಡ್ಯದ (Mandya) ಸ್ವರ್ಣಸಂದ್ರ ಬಳಿ ನಡೆದಿದೆ.
ಮೃತ ಬಾಲಕಿಯನ್ನು ಮದ್ದೂರು (Maddur) ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಎಂದು ಗುತಿಸಲಾಗಿದೆ. ಬಾಲಕಿಗೆ ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ, ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್ ಆಯಾ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ರಸ್ತೆಯಲ್ಲೇ ಮಗುವನ್ನು ಮಡಿನಲ್ಲಿಟ್ಟುಕೊಂಡು ತಂದೆ-ತಾಯಿ ಗೋಳಾಡಿದ್ದಾರೆ. ಅಲ್ಲದೇ ಸಾರ್ವಜನಿಕರು, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಮೃತ ಮಗುವಿನ ಪೋಷಕರಿಗೆ ಸಾಥ್ ನೀಡಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ, ಘಟನೆಯ ವರದಿ ಪಡೆದು, ಸ್ಥಳದಲ್ಲಿದ್ದ ಎಲ್ಲಾ ಪೊಲೀಸರನ್ನು ಸಸ್ಪೆಂಡ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.