ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂಧ ಮಳೆ ಬಿರುಸುಗೊಂಡಿದೆ. ಜಿಲ್ಲೆಯ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಅವಾಂತರಗಳು ಮುಂದುವರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಮೇ 26, 27ರಂದು ಎರಡು ದಿನಗಳ ಕಾಲ ಮಹಾವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಘಟಕ ಸರ್ಕಾರಿ ಹಾಗೂ ಸಂಯೋಜಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಹಾವಿದ್ಯಾಲಯಗಳಿಗೆ ಎರಡು ದಿನ ರಜೆ ಘೋಷಿಸಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಆದೇಶ ಹೊರಡಿಸಿದ್ದಾರೆ.
ಮಳೆಯ ಆರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಕಾವೇರಿ ಉಗಮಸ್ಥಾನ ತಲಕಾವೇರಿ ಭಾಗಮಂಡದಲ್ಲಿ ಧಾರಕಾರವಾಗಿ ಮಳೆಯಾಗುತ್ತಿರುವ ಪರಿಣಾಮದಿಂದ ತ್ರಿವೇಣಿ ಸಂಗಮದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ತ್ರಿವೇಣಿ ಸಂಗಮದ ಉದ್ಯಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಅಲ್ಲದೇ ಕ್ಷಣಕ್ಕೂ ಕ್ಷಣಕ್ಕೂ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನಾಪೋಕ್ಲು- ಅಯ್ಯಂಗೇರಿ – ಸಣ್ಣಪುಲಿಕೋಟ್ಟು ರಸ್ತೆ ಸಂಪರ್ಕ ಕಡತಗೊಳ್ಳುವ ಭೀತಿ ಎದುರಾಗಿದೆ. ಆದ್ರೆ ಈ ಬಾರಿ ಮೇಲುಸೇತುವೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾವೇರಿ ಭಕ್ತರು ಹಾಗೂ ಭಾಗಮಂಡಲದ ಗ್ರಾಮೀಣ ಭಾಗದ ಜನರು ಸೇತುವೆ ಮೇಲೆ ಸಂಚಾರ ಮಾಡುತ್ತಿದ್ದಾರೆ.
ಇನ್ನೂ ಕೊಡಗು ಜಿಲ್ಲೆಯ ಹಲವೆಡೆ ಮಳೆ ಅರ್ಭಟದಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರಶಾಹಿಯಾಗುತ್ತಿದ್ದು ಕಳೆದ ಎರಡು ಮೂರು ದಿನಗಳಿಂದ ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲೇ ಬದುಕು ಕಳೆಯುತ್ತಿದ್ದಾರೆ. ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮದಿಂದ ಕಾವೇರಿ ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಇನ್ನೂ ವಿಪರೀತ ಗಾಳಿ ಮಳೆಯಿಂದ ಸೆಸ್ಕ್ ಮಡಿಕೇರಿ ವಿಭಾಗದಲ್ಲಿ ಸುಮಾರು 197 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.