ಮುಂಗಾರು ಮಳೆಗೆ (Mungaru Male) ಅದೆಂತಹ ಶಕ್ತಿ ನೋಡು.. ಭೂಮಿಗೆ ಬಿದ್ದಾಗ ಗಂಧದ ಪರಿಮಳ ಸೂಸುತ್ತೆ… ಹಾಗೆ ಒಣಗಿದ ನೆಲದಲ್ಲಿ ಹಸಿರು ಚಿಗುರಿಸುತ್ತೆ… ಅಲ್ವಾ? ಹಾಗೆ ಎಲ್ಲೋ ಅವಿತು ಕುಳಿತಿರುವ ನೆನಪುಗಳ ಬೀಜಗಳನ್ನು ಮೊಳಕೆಯೊಡೆಯುವಂತೆ ಮಾಡಿಬಿಡುತ್ತೆ. ಮಳೆ… ಅದೆಂತಹ ಅದ್ಭುತ ಅಲ್ವಾ? ಎಷ್ಟೋ ಸಲ ಈ ಮುಂಗಾರು ಮನಸ್ಸಿಗೆ ಖುಷಿಯನ್ನ ಜೊರ್ರನೆ ಸುರಿಯತ್ತೆ.. ಎಷ್ಟೋ ಸಲ ಕಣ್ನೀರನ್ನು ತನ್ನೊಳಗೆ ಕರಗಿಸಿ.. ನೆನಪಿನ ಚಿಪ್ಪಿನೊಳಗೆ ಮತ್ತಷ್ಟು ಮುತ್ತುಗಳನ್ನು ಸೇರಿಸುತ್ತೆ.
ಹೀಗೆ ಕಿಟಕಿಯಲ್ಲಿ ಮುಂಗಾರು ಮಳೆಯ ಅಬ್ಬರ ನೋಡ್ತಿದ್ದಾಗ ಮನಸ್ಸಿನಲ್ಲಿ ಬಂದ ರಾಶಿ ರಾಶಿ ಯೋಚನೆಗಳು ಇಷ್ಟು.. ಇದೇ ಮಳೆ ಮತ್ತೆ ಬರಬಹುದಿತ್ತು… ಆ ದಿನ ಕಾಲೇಜು ಮುಗಿಸಿಕೊಂಡು ಬರುವಾಗ ಬಂದಂತೆ! ನಾನು ಅದೇ ಹೂ ಬಿಟ್ಟ ಗುಲ್‌ಮೊಹರಿನ ಮರದ ಕೆಳಗೆ ನಿಲ್ಲಬೇಕಿತ್ತು..! ಅದೇ ದಾರಿಯಲ್ಲಿ ನೀನು ಛತ್ರಿ ಹಿಡಿದುಕೊಂಡು, ಬಾ ಗೋಪಾಲ… ಮನೆ ತನಕ ಬಿಡ್ತೀನಿ ಅಂತ ಮತ್ತೆ ಕರೆಯಬೇಕಿತ್ತು.. ಅದೆಂತಹ ಕನವರಿಕೆ ಅಲ್ವಾ…? ಬಹುಶಃ ಮೀರಾಳಿಗೂ ಇದೇ ರೀತಿ ಅನ್ನಿಸ್ತಿರಬಹುದು..?
ಇವತ್ತೇನಾದ್ರೂ ಮೀರಾಳ ಮನೆಯ ಅಂಗಳದಲ್ಲಿ ಪಟಪಟ ಅಂತ ಮಳೆ ಬೀಳ್ತಿದ್ರೆ, ಅವತ್ತು ನಾವಿಬ್ರೂ ಅದೇ ಮರದ ಕೆಳಗಿಂದ ಒಂದೇ ಕೊಡೆಯಲ್ಲಿ ಬಂದ ನೆನಪು ಅವಳಿಗೂ ಕಾಡ್ಬಹುದು… ಆ ಮಳೆಯಲ್ಲಿ ನಮ್ಮ ನಡುವೆ ಆದ ಮನಸ್ತಾಪದ ಕೆಸರೆಲ್ಲ ಕೊಚ್ಚಿಹೋಗಿ… ಮತ್ತೆ ತಿಳಿ ನೀರು ಹರಿಯಬಹುದು..! ಅಲ್ವಾ? ನನಗಂತೂ ಅದೇ ಆಸೆ ಆಗ್ತಿದೆ. ಒಣಗಿ ಸತ್ತುಬಿದ್ದ ಅಂಗಳ.. ಮಳೆ ಬಂದ ಮಾರನೇ ದಿನ ಹಸಿರಿನಿಂದ ನಳನಳಿಸುವಂತೆ ಬದುಕು ಆಗಬಾರದಿತ್ತೇ ಅಂತ..
ಆ ದಿನ ಅದೆಷ್ಟು ಹೆಜ್ಜೆ ನಡೆದಿದ್ದೆ ನಿನ್ನ ಜೊತೆ.. ನೆನಪಿದಿಯಾ ನಿಂಗೆ… ಆಗೆಲ್ಲ ಮಳೆ ಜೊತೆ ಸೇರಿ ಬರುತ್ತಿದ್ದ ನಿನ್ನ ಕಾಲ್ಗೆಜ್ಜೆಯ ಸದ್ದು, ಜುಮುಕಿಯ ಜೋಕಾಲಿಯಾಟ..! ಆಗಾಗ ಸರಿಸುತ್ತಿದ್ದ ಪುಟ್ಟ ಝರಿಯ ಮುಂಗುರುಳು… ಆ ಮಧ್ಯೆ ದಾರಿಯಲ್ಲಿ ಗೋಪಾಲ ನೀನು ಹೀಗೆಲ್ಲ ನೋಡಿದ್ರೆ ಮಳೆಲಿ ತಳ್ಳಿ ಬಿಟ್ಟು ಹೋಗ್ತಿನಿ ನೋಡು ಅಂತ ಹೇಳಿದ್ದ ಮಾತು… ಹೂಂ, ಸರಿ ತಳ್ಳು ಅಂದಾಗ… ಬೇಡ ನಿಂಗೆ ಕೋಲ್ಡ್ ಆಗ್ಬಿಟ್ರೆ, ಅಂತ ವೇಲ್ ತಲೆ ಮೇಲೆ ಹೊದಿಸಿದ್ದು ಇದೆಲ್ಲ ನೆನಪು ಮಾಡ್ಕೊಂಡ್ರೆ ಮತ್ತೆ ಅಂತಹದೊಂದು ಕಾಲ ಬರಲಿ ಅಂತ ಆಸೆ ಆಗುತ್ತೆ.. ಈಗಲೂ ಆ ಹೆಜ್ಜೆಗಳಿಗಾಗಿ ದೇವರ ಬಳಿ ಕೇಳ್ಕೊಳ್ತೇನೆ. ಆ ಮರದ ಕೆಳಗೆ ಉರಿಬಿಸಿಲಲ್ಲಿ ನಿಂತು, ಮಳೆ ಬರಬಾರದ ಅಂತ ಹುಚ್ಚನಂತೆ ಆಸೆಪಡ್ತೀನಿ..!
ಆ ದಿನ ಬಿದ್ದ ಮುಂಗಾರು ಮಳೆಯ ನೀರು ನನ್ನ ಎದೆಯ ಮಡುವಲ್ಲಿ ಈಗಲೂ ಇದೆ..! ಅದರಲ್ಲಿ ನೀನು ಮೀನಾಗಿ ಈಜಾಡ್ತಿದಿಯಾ… ಮೀರಾ.. ಮತ್ತೆ ನಾವು ಒಂದೇ ಕೊಡೆಯ ಕೆಳಗೆ ನಡೆದಾಡ್ತಿವೋ ಇಲ್ವೋ ಗೊತ್ತಿಲ್ಲ.. ಈ ಮಡುವಂತು ನನ್ನ ಜೀವ ಇರೋವರೆಗೂ ಬತ್ತಲ್ಲ.
ಬಹುಶಃ ಪ್ರಪಂಚದ ಎಲ್ಲಾ ಪ್ರೇಮಿಗಳಿಗೂ ಮುಂಗಾರು ಮಳೆ ಇಷ್ಟೇ ನೆನಪಿಟ್ಟಿರುತ್ತೆ ಅನ್ಸುತ್ತೆ.. ಒಬ್ಬ ಪಂಜಾಬಿ ಕವಿ… ʻಈ ಮಳೆ ಹನಿಗಳಲ್ಲಿ ನನ್ನ ಸಂಭ್ರಮವೂ ಇದೇ, ನನ್ನ ಸಂಕಟವು ಇದೆʼ ಅಂತ ತನ್ನ ಪ್ರೇಮಿಯ ನೆನಪುಗಳ ಬಗ್ಗೆ ಬರಿತಾನೆ. ಬಹುಶಃ ಕಳೆದು ಹೋದ ಪ್ರೇಮಿಯ ಪ್ರೇಮದ ಜಾಲದಲ್ಲಿ ಸಿಕ್ಕ ಪ್ರತಿಯೊಂದು ಜೀವದ ಭಾವ ಇದೇ ಇರಬೇಕು? ಅದಕ್ಕೆ ಪ್ರತಿ ವರ್ಷದ ಮಳೆಗೂ ಜೀವ ಇರೋದು! ಅಮೃತಧಾರೆಯಾಗಿ ಪ್ರೇಮಿಗಳ ಜೀವ ಹಿಂಡೋದು!
ಹಾಗೆಲ್ಲ ಜೀವ ಹಿಂಡುವ ಮಳೆ ಅದೆಷ್ಟು ಚೆಂದ ಅಲ್ವಾ..? ಉದುರಿ ಬಿದ್ದ ಹೂಗಳ ಹಾದಿ, ತಣ್ಣಗೆ ಸೋಕುವ ಗಾಳಿ.. ಅಮ್ಮ ಕರಿಯುವ ತಿಂಡಿಯ ಘಮ… ಎದೆಯನ್ನು ಬೆಚ್ಚಗಿಡುವ ಪ್ರೇಮ.. ಮಿಸ್ ಯು ಮೀರಾ…. ಮತ್ತೆ ಮಳೆ ಬರಲಿ…. ಆ ಮರದ ಕೆಳಗೆ ನನ್ನ ನೆನಪು ನಿನಗೂ ಸಿಗಲಿ! ಅವಕಾಶ ಸಿಕ್ರೆ ಮತ್ತೆ ನನ್ನದೋ.., ನಿನ್ನದೋ ಕೊಡೆಯಲ್ಲಿ ಬದುಕಿನುದ್ದಕ್ಕೂ ಮಳೆಯಲ್ಲೇ ನಡೆದು ಬಿಡೋಣ!
– ಗೋಪಾಲಕೃಷ್ಣ