ಬಾಗಲಕೋಟೆ: ನಿರಂತರ ಮಳೆಯಿಂದ ಕೃಷ್ಣಾ ನದಿಯಲ್ಲಿ (Krishna River) ನೀರು ಹೆಚ್ಚಾಗಿದ್ದು ಚಿಕ್ಕಪಡಸಲಗಿ ಬ್ಯಾರೇಜ್‌ಗೆ (Chikkapadasalagi Barrage) ಜೀವ ಕಳೆ ಬಂದಿದೆ.
ಬಯಲು ಸೀಮೆ ನಾಡು ಬಾಗಲಕೋಟೆ ಜಿಲ್ಲೆಯಲ್ಲಿ (Bagalkot District) ಈಗಾಗಲೇ ಉತ್ತಮ ಮಳೆ ಆಗುತ್ತಿದ್ದು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣೆ ಸಹ ಮೈದುಂಬಿ ಹರಿಯಲು ಶುರು ಮಾಡಿದ್ದಾಳೆ.
ಬಿರು ಬೇಸಿಗೆಯಿಂದ ಖಾಲಿ ಖಾಲಿಯಾಗಿದ್ದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ನೀರನ್ನು ನೋಡಿ ರೈತರು ಸಂಭ್ರಮಿಸಿದ್ದಾರೆ.
ಚಿಕ್ಕಪಡಸಲಗಿ ಬ್ಯಾರೇಜ್ ರೈತರಿಂದ ರೈತರಿಗಾಗಿ ನಿರ್ಮಿಸಿದ ಬ್ಯಾರೇಜ್ ಆಗಿದ್ದು ಬೇಸಿಗೆಯಲ್ಲಿ ಬರಿದಾಗಿತ್ತು. ನದಿ ತೀರದ ರೈತರು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಮಳೆಯಿಂದ ಭರ್ಜರಿ ನೀರು ಬಂದಿದ್ದು, ನದಿ ತೀರದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.