2,200 ಕೋಟಿ ರೂ. ಭ್ರಷ್ಟಾಚಾರ ಕೇಸ್‌ – ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ

Public TV
3 Min Read
SATYAPAL MALIK

ನವದೆಹಲಿ: ಬರೋಬ್ಬರಿ 2,200 ಕೋಟಿ ರೂ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ (Satyapal Malik) ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಕಿರು ಜಲವಿದ್ಯುತ್ ಯೋಜನೆಗೆ 2,200 ಕೋಟಿ ರೂ.ಗಳ ನಾಗರಿಕ ಕಾಮಗಾರಿಗಳ ಮಂಜೂರಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಕರಣದಲ್ಲಿ ಸತ್ಯಪಾಲ್ ಮಲಿಕ್ ಮತ್ತು ಇತರ ಏಳು ಜನರ ವಿರುದ್ಧ ಸಿಬಿಐ (CBI) ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

ಮೂರು ವರ್ಷಗಳ ತನಿಖೆಯ ನಂತರ ವಿಶೇಷ ನ್ಯಾಯಾಲಯದ ಮುಂದೆ ಸಿಬಿಐ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಮಲಿಕ್ ಮತ್ತು ಅವರ ಇಬ್ಬರು ಸಹಾಯಕರಾದ ವೀರೇಂದ್ರ ರಾಣಾ ಮತ್ತು ಕನ್ವರ್ ಸಿಂಗ್ ರಾಣಾ ಅವರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಪಟ್ಟಿಯಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳಲ್ಲಿ ಆಗಿನ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (ಸಿವಿಪಿಪಿಪಿಎಲ್) ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಬಾಬು, ಅದರ ನಿರ್ದೇಶಕರಾದ ಅರುಣ್ ಕುಮಾರ್ ಮಿಶ್ರಾ ಮತ್ತು ಎಂ.ಕೆ.ಮಿತ್ತಲ್, ನಿರ್ಮಾಣ ಸಂಸ್ಥೆ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರೂಪೇನ್ ಪಟೇಲ್ ಮತ್ತು ಖಾಸಗಿ ವ್ಯಕ್ತಿ ಕನ್ವಲ್ಜೀತ್ ಸಿಂಗ್ ದುಗ್ಗಲ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

cbi bengaluru

ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್ ಮತ್ತು ಇತರರ ನಿವಾಸಗಳಲ್ಲಿ ಸಿಬಿಐ ಶೋಧ ನಡೆಸಿತ್ತು. 2019 ರಲ್ಲಿ ಕಿರು ಹೈಡ್ರೊ ಎಲೆಕ್ಟ್ರಿಕ್ ಪವರ್ (ಎಚ್‌ಇಪಿ) ಯೋಜನೆಯ ಸುಮಾರು 2,200 ಕೋಟಿ ರೂ. ಮೌಲ್ಯದ ಸಿವಿಲ್ ಕಾಮಗಾರಿಗಳ ಒಪ್ಪಂದವನ್ನು ಖಾಸಗಿ ಕಂಪನಿಗೆ ನೀಡುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಈ ಪ್ರಕರಣ ಸಂಬಂಧಿಸಿದೆ ಎಂದು 2022 ರಲ್ಲಿ ಎಫ್‌ಐಆರ್ ದಾಖಲಾದ ನಂತರ ಸಿಬಿಐ ಹೇಳಿತ್ತು.

ಈ ಹಿಂದೆ ಪ್ರಧಾನಿ ಮೋದಿ ಅವರ ವಿರುದ್ಧ ಸತ್ಯಪಾಲ್‌ ಮಲಿಕ್‌ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆದರೆ, ಈಗ ಸ್ವತಃ ಮಲಿಕ್‌ ಅವರೇ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಇದನ್ನೂ ಓದಿ: ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಕುದಿಯುತ್ತಲೇ ಇರುತ್ತೆ – ಪಾಕ್‌ಗೆ ಮೋದಿ ಖಡಕ್‌ ಸಂದೇಶ

ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ ಬೆನ್ನಲ್ಲೇ ಮಲಿಕ್‌ ಅವರ ಎಕ್ಸ್‌ ಖಾತೆಯಿಂದ ಪೋಸ್ಟ್‌ವೊಂದು ಬಂದಿದೆ. ‘ನನ್ನ ಅನೇಕ ಹಿತೈಷಿಗಳಿಂದ ನನಗೆ ಕರೆಗಳು ಬರುತ್ತಿವೆ. ಆದರೆ ನಾನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸ್ಥಿತಿ ಈಗ ತುಂಬಾ ಕೆಟ್ಟದಾಗಿದೆ. ನಾನು ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿಲ್ಲ. ನಾನು ಮೇ 11 ರಿಂದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸೋಂಕಿನ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಸ್ಥಿತಿ ತುಂಬಾ ಗಂಭೀರವಾಗಿದ್ದು, ಕಳೆದ ಮೂರು ದಿನಗಳಿಂದ ಮೂತ್ರಪಿಂಡದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದೇನೆಂದು’ ಮಾಡಲಾಗಿದೆ.

ಸತ್ಯಪಾಲ್‌ ಮಲಿಕ್‌ ಅವರ ಎಕ್ಸ್‌ ಖಾತೆ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ ಬೆನ್ನಲ್ಲೇ ನಿಮಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಜ್ಯೋತಿ ಮಲ್ಹೊತ್ರಾಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ

Share This Article