ಬೆಂಗಳೂರು: 16 ವರ್ಷದಲ್ಲೇ ಮೊದಲ ಬಾರಿಗೆ ಅವಧಿಗೂ ಮುನ್ನ ಮುಂಗಾರು ಮಳೆ (Mansoon Rain) ರಾಜ್ಯವನ್ನು ಪ್ರವೇಶಿಸಲಿದೆ. ಈ ಬಾರಿ ಐದಾರು ದಿನ ಮುಂಚೆಯೇ ಅಂದರೆ ಮೇ 27ಕ್ಕೆ ಕೇರಳಕ್ಕೆ (Kerala) ಮುಂಗಾರು ಪ್ರವೇಶಿಸಲಿದ್ದು, ಕರ್ನಾಟಕಕ್ಕೆ (Karnataka) ಮೇ 30 ಅಥವಾ 31ಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮೊದಲು 2009ರಲ್ಲಿ ಮೇ 23 ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿತ್ತು. ಅದಾಗಿ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಬಾರಿ ಮೇ 27ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ಅದಕ್ಕಿಂತಲೂ ನಾಲ್ಕು ದಿನ ಮುಂಚಿತವಾಗಿ ಎಂಟ್ರಿ ಕೊಡಲಿದೆ. ಹೀಗಾಗಿ ಈ ಸಲದ ಖಾರಿಫ್ ಬಿತ್ತನೆಯ ಋತುವಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. 2024ರಲ್ಲಿ ಕರ್ನಾಟಕಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಿತ್ತು. ಈ ಬಾರಿ ಕೇರಳಕ್ಕೆ ಮೇ 27ಕ್ಕೆ ಆಗಮಿಸುತ್ತಿದ್ದು, ಕರ್ನಾಟಕಕ್ಕೆ ಮೇ 30 ಅಥವಾ 31ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
2009ರಲ್ಲಿ ಮುಂಗಾರು ಪ್ರವೇಶ ಅತ್ಯಂತ ವೇಗವಾಗಿ ಬಂದ ಮಾನ್ಸೂನ್ ಆಗಿತ್ತು. ಅಲ್ಲದೇ ಆ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಶೀಘ್ರ ಮುಂಗಾರು ಪ್ರವೇಶಿಸಲಿದ್ದು, ಈ ಸಲವೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ವಾಡಿಕೆ ಅವಧಿಗಿಂತ ಮೊದಲೇ ಬೇಗ ಮುಂಗಾರು ಆಗಮನವಾದರೆ ಅತ್ಯಧಿಕ ಮಳೆ ದಾಖಲಾಗುವ ಸಂಭವವಿದೆ. ಈ ಬಾರಿಯೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: BBMP ವ್ಯಾಪ್ತಿಯಲ್ಲಿನ ಕಾಮಗಾರಿಗಳ ಹಣ ಬಿಡುಗಡೆಗೆ ಆದೇಶ
ಈ ಬಾರಿ ಹಿಂದಿನ ವರ್ಷಗಳಿಗಿಂತ ಮಳೆಯ ಅಬ್ಬರ ಹೆಚ್ಚಿರಲಿದೆ. ಜೂನ್-ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳು ಮುಂಗಾರು ಋತುವಿನಲ್ಲಿ ಹೆಚ್ಚಿನ ಮಳೆಯಾಗಲಿದೆ. ಈ ಬಾರಿ ಸರಾಸರಿ 87 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್ ಮ್ಯಾಚ್