– ಪವನ್ ಕಲ್ಯಾಣ್‌ಗೆ ಕುಮ್ಕಿ ಆನೆ ಹಸ್ತಾಂತರಿಸಲಿರುವ ಸಿಎಂ, ಡಿಸಿಎಂ
ಬೆಂಗಳೂರು: ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದ್ದು, ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwara Khandre) ತಿಳಿಸಿದ್ದಾರೆ.
ವಿಧಾನಸೌಧದ (Vidhan Soudha) ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ವಿಧ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ (Pawan Kalyan) ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡುವರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ
ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ- ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದೂ ಖಂಡ್ರೆ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 8ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ 27ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೇ 21ರಂದು ಈ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?
ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ:
ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ನೆರೆಯ ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರದಿಂದ ರಾಜ್ಯಕ್ಕೂ ಪರೋಕ್ಷವಾಗಿ ಲಾಭವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ದಸರಾ ಆನೆ ಹಸ್ತಾಂತರ ಇಲ್ಲ:
ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎಂದೂ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ