ತುಮಕೂರು: ಕಾಂಗ್ರೆಸ್ (Congress) ಕೆಲವು ಅಯೋಗ್ಯರು ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ (Tumkuru) ಆಪರೇಷನ್ ಸಿಂಧೂರ್ (Operation Sindoor) ಯಶಸ್ವಿ ಹಿನ್ನೆಲೆ ನಡೆಸುತ್ತಿರುವ ಬೃಹತ್ ತಿರಂಗಾಯಾತ್ರೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಜನರು ಪ್ರಾಣ ಕಳೆದುಕೊಂಡರು. ಇದರಿಂದಾಗಿ ಉಗ್ರಗಾಮಿ ಸಂಘಟನೆಗಳು, ಪಾಕ್ ವಿರುದ್ಧ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನ ರಕ್ತ ಕುದಿಯುತ್ತಿತ್ತು. `ಆಪರೇಷನ್ ಸಿಂಧೂರ’ದಿಂದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ. ವೀರಯೋಧರು ರಾತ್ರೋರಾತ್ರಿ ದಾಳಿ ನಡೆಸಿದರು. ಕ್ಷಿಪಣಿ ದಾಳಿ ಮಾಡಿ, ಉಗ್ರಗಾಮಿಗಳ ನೆಲೆ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಭಾರತ, ಅಮೆರಿಕಾದ ಹಿಟ್ ಲಿಸ್ಟ್‌ನಲ್ಲಿದ್ದ ಉಗ್ರಗಾಮಿಗಳನ್ನು ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ ಎಂದರು.ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ
ನಮ್ಮ ವೀರಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ಈ ತಿರಂಗಯಾತ್ರೆ ಮಾಡುತ್ತಿದ್ದೇವೆ. ಆ ದುಷ್ಟ ಪಾಕಿಸ್ತಾನಕ್ಕೆ ಮೋದಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಅಂದಿದ್ದಾರೆ. ಸಿಂಧೂ ನದಿ ನೀರು ಬೇಕಾದರೆ ಭಾರತದಲ್ಲಿ ಹರಿಯುತ್ತಿರುವ ರಕ್ತ ನಿಲ್ಲಿಸಬೇಕಾಗಿದೆ. ಪಾಕಿಸ್ತಾನ ಸರ್ವನಾಶ ಮಾಡಲು ಭಾರತ ಹೆದರುವುದಿಲ್ಲ ಎಂದು ಹೇಳಿದ್ದರು.
ರಾಷ್ಟ್ರ ರಕ್ಷಣೆಗಾಗಿ ನಾಗರಿಕರಿಂದ ತಿರಂಗಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ತುಮಕೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ದೇಶ ಭಕ್ತರು ಸೇರಿ ತಿರಂಗಯಾತ್ರೆ ಯಶಸ್ವಿಯಾಗಿಸಿದ್ದಾರೆ. ರಾಜಕೀಯ ಕಾರಣಕ್ಕೆ ತಿರಂಗಯಾತ್ರೆ ಮಾಡುತ್ತಿಲ್ಲ. ಸೈನಿಕರಿಗೆ ನೈತಿಕ ಬೆಂಬಲ ನೀಡುವಂತೆ ಇಡೀ ರಾಷ್ಟ್ರದಲ್ಲಿ ಜಾಗೃತಿಗೊಳಿಸಬೇಕೆಂದು ಮಾಡುತ್ತಿದ್ದೇವೆ. ಭಾರತದಲ್ಲಿದ್ದೂ ಶತ್ರು ರಾಷ್ಟ್ರಕ್ಕೆ ಸಪೋರ್ಟ್ ಮಾಡುವ ತುಂಬಾ ಜನರಿದ್ದಾರೆ. ರಾಜ್ಯಸಭಾ ಚುನಾವಣಾ ವೇಳೆ ವಿಧಾನಸೌಧದ ಒಳಗಡೆ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ. ಅಂಥಹ ದೇಶದ್ರೋಹಿಗಳನ್ನು ಹುಡುಕುವ ಕೆಲಸ ಆಗಬೇಕಿದೆ. ನರೇಂದ್ರ ಮೋದಿಯವರು ಆ ಕೆಲಸ ಮಾಡಿಯೇ ಮಾಡುತ್ತಾರೆ. ನಮ್ಮ ತಿರಂಗಯಾತ್ರೆ ಪಕ್ಷದ್ದಲ್ಲ, ಇದಕ್ಕೆ ರಾಜಕಾರಣ ಮಾಡಬಾರದು. ಬಿಜೆಪಿ ಪಕ್ಷದ ಬಾವುಟ, ಶಲ್ಯ ಇದರಲ್ಲಿ ಕಾಣ ಸಿಗುವುದಿಲ್ಲ. ಇದು ಪಕ್ಷಾತೀತ ತಿರಂಗಯಾತ್ರೆ ಎಂದು ಹೇಳಿದರು.
ಬಿ.ಕೆ.ಹರಿಪ್ರಸಾದ್ ಪಾಕಿಸ್ತಾನ ಶತ್ರುರಾಷ್ಟ್ರ ಅಲ್ಲ, ಪಕ್ಕದ ರಾಷ್ಟ್ರ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಧುರೀಣರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಎಷ್ಟಿದೆ ಎಂದು ಹಲವು ಬಾರಿ ಸಾಬೀತಾಗಿದೆ. ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಶಾಂತಿ ಬೇಕು ಎಂದಿದ್ದರು. ಹಾಗಾಗಿ ದೇಶದ್ರೋಹಿಗಳನ್ನು ಕಾಂಗ್ರೆಸ್ ಪಕ್ಷದವರು ಬೆಂಬಲ ಕೊಡುವುದು ಮಹಾಪರಾಧ. ಪಾಕಿಸ್ತಾನ ಶತ್ರು ಅಥವಾ ಮಿತ್ರ ರಾಷ್ಟ್ರ ಎನ್ನುವುದಕ್ಕಿಂತ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು. ಕೊತ್ತೂರು ಮಂಜುನಾಥ್ ಹೇಳಿಕೆಯಿಂದಾಗಿ ಯೋಧರಿಗೆ ಅಪಮಾನವಾಗಿದೆ. ಇಂಥಹ ಸಂದರ್ಭದಲ್ಲಿ ದೇಶದ ಪರ ನಿಲ್ಲಬೇಕು ಹೊರತು ದೇಶ ವಿರೋಧಿ ಹೇಳಿಕೆ ಕೊಡಬಾರದು. ಆದರೆ ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅಂಥವರ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು.ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?