– ಭಾರತೀಯ ಸೇನೆಯ ಮಾಹಿತಿ ಸೋರಿಕೆ ಮಾಡಿ ದೇಶದಿಂದ ಹೊರಹಾಕಲ್ಪಟ್ಟ ಅಧಿಕಾರಿ ಜೊತೆ ನಂಟು
ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra), ಕಳೆದ ವರ್ಷ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ (Pakistan High Commission) ಇಫ್ತಾರ್ ಔತಣಕೂಟದಲ್ಲಿ ಭಾಗವಹಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
ಇಫ್ತಾರ್ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ್ದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡುವ ಆಸಕ್ತಿಯನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ. ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ. ಇದನ್ನೂ ಓದಿ: ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ!
‘ಟ್ರಾವೆಲ್ ವಿತ್ ಜೋ’ ಎಂಬ ಪ್ರಯಾಣ ಯೂಟ್ಯೂಬ್ ಖಾತೆಯನ್ನು ಹೊಂದಿರುವ 33 ವರ್ಷದ ಜ್ಯೋತಿ, ಪಾಕಿಸ್ತಾನದ ಹೈಕಮಿಷನ್ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್‌ನನ್ನು ಭೇಟಿಯಾಗಿರುವ ವೀಡಿಯೊ ಕೂಡ ಇದೆ.
ಬೇಹುಗಾರಿಕೆ ಮತ್ತು ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಡ್ಯಾನಿಶ್‌ನನ್ನು 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿತ್ತು. ಮಲ್ಹೋತ್ರಾ, ರಹೀಮ್ ಪತ್ನಿಯನ್ನು ಸಹ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ
ಕಳೆದ ವರ್ಷ ಮಾರ್ಚ್ 30 ರಂದು ಪೋಸ್ಟ್ ಮಾಡಲಾದ ಈ ವೀಡಿಯೊ, ಮಲ್ಹೋತ್ರಾ ತನ್ನನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳುವ ಮೂಲಕ ಪ್ರಾರಂಭವಾಗುತ್ತದೆ. ನಂತರ ಹೈಕಮಿಷನ್‌ಗೆ ಪ್ರವೇಶಿಸಿ, ಅಲಂಕಾರವನ್ನು “ಅದ್ಭುತ” ಎಂದು ಬಣ್ಣಿಸುತ್ತಾರೆ.