ಬೆಂಗಳೂರು: ರಾಜ್ಯದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾದ ಬಳಿಕ ಇದೀಗ ಮತ್ತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಸರ್ಕಾರ (State Government) ಮತ್ತೆ ಜನರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.
ಹೌದು, ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆಯನ್ನು ಸರ್ಕಾರ ಲೀಟರ್‌ಗೆ 4 ರೂ. ಏರಿಕೆ ಮಾಡಿ, ಜನರಿಗೆ ಶಾಕ್ ಕೊಟ್ಟಿತ್ತು. ಈ ದರ ಏರಿಕೆಯ ಭಾರ ಹೊರುತ್ತಿರುವಾಗಲೇ ಮತ್ತೆ ಹಾಲಿನ ದರ ಏರಿಕೆ ವಿಚಾರ ಚರ್ಚೆಗೆ ಬಂದಿದ್ದು, ಮತ್ತೆ ದರ ಹೆಚ್ಚಳವಾಗುತ್ತಾ ಎನ್ನುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 18-05-2025
ಇದೇ ತಿಂಗಳ 21ಕ್ಕೆ ಈಗಿನ ಕೆಎಂಎಫ್ (KMF) ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಇದೇ 25ಕ್ಕೆ ಹೊಸ ನಿರ್ದೇಶಕರ ಆಯ್ಕೆ ಆಗಲಿದೆ. ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಮುಂದೆ ಮತ್ತೆ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲು ಚರ್ಚೆ ನಡೆಯುತ್ತಿದೆ.
ಈ ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಸುಳಿವು ನೀಡಿದ್ದಾರೆ. ಬಮುಲ್‌ನ 18 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಕನಕಪುರ ತಾಲೂಕು ನಿರ್ದೇಶಕ ಸ್ಥಾನಕ್ಕೆ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಿದ್ದಾರೆ. ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ಡಿಕೆ ಸುರೇಶ್ ಕೆಎಂಎಫ್ ಅಧಿಕಾರ ಹಿಡಿಯಲು ಹಲವು ಬದಲಾವಣೆ ಮಾಡಬೇಕಿದೆ. ರೈತರಿಗೆ ಒಳ್ಳೆಯದನ್ನು ಮಾಡಬೇಕಿದೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗಿ ಬಂದರೆ, ಸಿಎಂ, ಡಿಸಿಎಂಗೆ ಹತ್ತಿರವಿರುವ ಕಾರಣ ರೈತರಿಗೆ ದರ ಹೆಚ್ಚಳ ಮಾಡಲು ಸಹಕಾರಿಯಾಗಲಿದ್ದು, ಇನ್ನೂ ಹತ್ತು ರೂ. ಹೆಚ್ಚಳ ನೀಡಬೇಕಿದೆ. ಡಿಕೆ ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಿಎಂ ಜೊತೆ ಮಾತನಾಡಿ 5 ರೂ. ಆದರೂ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಕೆಎಂಎಫ್ ಆಡಳಿತ ಮಂಡಳಿ ಬದಲಾವಣೆ ಬಳಿಕ ಈ ಎಲ್ಲಾ ಬೆಳವಣಿಗೆಗಳು ಶೀಘ್ರವೇ ಆರಂಭವಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಜನ ಈಗಾಗಲೇ ದರ ಏರಿಕೆಯಿಂದ ಕಂಗೆಟ್ಟಿದ್ದು, ಈ ಮಧ್ಯೆ ಮತ್ತೆ ಸರ್ಕಾರ ದರ ಏರಿಕೆ ಬಗ್ಗೆ ಯೋಚನೆ ಮಾಡುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.ಇದನ್ನೂ ಓದಿ: ಸ್ವಾದಿಷ್ಟವಾದ ಕಡಾಯಿ ಪನ್ನೀರ್ ಹೀಗೆ ಮಾಡಿ..