ಬೆಂಗಳೂರು/ನವದೆಹಲಿ: ʻಆಪರೇಷನ್ ಸಿಂಧೂರʼರಲ್ಲಿ (Operation Sindoor) ಭಾರತದ ಸೇನಾ ಸಾಮರ್ಥ್ಯ ಕಂಡು ಇಡೀ ಜಗತ್ತೇ ಅಚ್ಚರಿಗೊಂಡಿದೆ. ಹೀಗಾಗಿ ಭಾರತದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಭಾರತದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗುತ್ತಿರುವ ಬಗ್ಗೆ ರಕ್ಷಣಾ ಕ್ಷೇತ್ರದ ವಿಶ್ಲೇಷಕ ಗಿರೀಶ್ ಲಿಂಗಣ್ಣ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ್ದಾರೆ.
ಸದ್ಯ ಇಸ್ರೇಲ್‌ನ ಐರನ್ ಡೋಮ್, ರಷ್ಯಾದ S-400, ಅಮೆರಿಕ ಅಭಿವೃದ್ಧಿಪಡಿಸಿರುವ ಥಾಢ್ ಏರ್ ಡಿಫೆನ್ಸ್ ಸಿಸ್ಟಂ, ಡೇವಿಡ್ ಸಿಲ್ಲಿಂಗ್ ಏರ್ ಡಿಫೆನ್ಸ್ ಸಿಸ್ಟಂ ಜಗತ್ತಿನ ಶಕ್ತಿಶಾಲಿ ವಾಯುರಕ್ಷಣಾ ವ್ಯವಸ್ಥೆಗಳಾಗಿ ಗುರುತಿಸಿಕೊಂಡಿವೆ. ಆದ್ರೆ ಎಸ್-500 ಏರ್ ಡಿಫೆನ್ಸ್ ಸಿಸ್ಟಂ ಭಾರತಕ್ಕೆ ಬಂದರೆ ಜಗತ್ತಿನಲ್ಲಿ ಭಾರತದ ಸೇನಾ ಶಕ್ತಿ ಮತ್ತಷ್ಟು ಬಲಿಷ್ಠವಾಗಲಿದೆ. ಜೊತೆಗೆ ಅಮೆರಿಕ, ರಷ್ಯಾ ದೇಶಗಳ ವಾಯುರಕ್ಷಣಾ ವ್ಯವಸ್ಥೆಯನ್ನೂ ಹಿಂದಿಕ್ಕಲಿದೆ ಎಂದು ತಿಳಿಸಿದ್ದಾರೆ.
ಎಸ್-500 ರಕ್ಷಣಾ ವ್ಯವಸ್ಥೆಯು ಎಸ್-400ನ ಮುಂದುವರಿದ ಭಾಗವಾಗಿದೆ. 600 ಕಿಮೀ ದೂರದಿಂದಲೇ ಶತ್ರುಗಳ ಡ್ರೋನ್, ಫೈಟರ್ ಜೆಟ್, ಮಿಸೈಲ್‌ಗಳನ್ನ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದರ್ಶನ ಚಕ್ರಕ್ಕೆ ಭಾರತ ಬೇಡಿಕೆ
ಆಪರೇಷನ್ ಸಿಂಧೂರದ ಕಾರ್ಯಾಚರಣೆ ವೇಳೆ ಪಾಕ್‌ನಿಂದ ಬರುತ್ತಿದ್ದ ಕ್ಷಿಪಣಿಗಳನ್ನು ಧ್ವಂಸಗೈದು ಭಾರತವನ್ನು (India) ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆ ಹೆಚ್ಚಾಗಿದೆ. ಪಾಕ್ ನಡುವಿನ ಸಂಘರ್ಷದಲ್ಲಿ ಇದರ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತಷ್ಟು S-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆಯಿಟ್ಟಿದೆ ಎಂದು ವರದಿಗಳು ತಿಳಿಸಿವೆ.