ಬೆಂಗಳೂರು: ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಲೇವಡಿ ಮಾಡಿದರು.
ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮೂರು ಭಾಗ ಮಾಡಿದೆ. ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. 110 ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ತೆರಿಗೆ ವಿಧಿಸಲಾಗಿದೆ. ಯಾರದ್ದೋ ಜಮೀನಿಗೆ ಬೆಲೆ ಹೆಚ್ಚಿಸುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ. ಬೆಂಗಳೂರು ಭಾಗವಾದರೆ ಆದಾಯ ಬರುವುದಿಲ್ಲ. ಐಟಿ-ಬಿಟಿ ಕೇಂದ್ರಗಳು ಒಂದು ಕಡೆ ಇರುವಾಗ, ಮತ್ತೊಂದು ಕಡೆಗೆ ಆದಾಯವೇ ಬರುವುದಿಲ್ಲ. ಮೂರು ಪಾಲಿಕೆಗಳು ನಿರ್ಮಾಣವಾದರೆ ಅಲ್ಲಿ ಕನ್ನಡಿಗರೇ ಮೇಯರ್ ಆಗುತ್ತಾರೆ ಎಂಬ ಖಚಿತತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್!
ಮುಖ್ಯಮಂತ್ರಿಗಳು ಪಾಲಿಕೆಯಿಂದ ಆಯ್ಕೆಯಾಗುವುದಿಲ್ಲ ಎಂದಾದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆ ಸಭೆಯಲ್ಲಿ ಬಂದು ಕೂರಲು ಸಾಧ್ಯವಿಲ್ಲ. ಬೆಂಗಳೂರು ಭಾಗ ಆಗಬಾರದು ಎಂಬುದು ಬಿಜೆಪಿಯ ಅಭಿಪ್ರಾಯ. ಮುಂದೆ ನಮ್ಮ ಸರ್ಕಾರ ಬಂದರೆ ಬೆಂಗಳೂರನ್ನು ಒಂದು ಮಾಡುವ ಕೆಲಸ ಮಾಡುತ್ತೇವೆ. ಗ್ರೇಟರ್ ಬೆಂಗಳೂರಿಗೆ ವಿರುದ್ಧವಾಗಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಲಾಭಕ್ಕೆ ಎಲ್ಲವನ್ನೂ ಮಾಡುತ್ತಿದ್ದಾರೆ. ಬಿಡಿಎ ಲೇಔಟ್‌ಗಳು ಇನ್ನೂ ಖಾಲಿ ಇದ್ದು, ಅಲ್ಲಿಗೆ ನೀರು, ವಿದ್ಯುತ್ ಕೊಡಲು ಆಗುತ್ತಿಲ್ಲ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಈ ಯೋಜನೆ ಮಾಡಿದ್ದಾರೆ. ನಗರದಲ್ಲಿ ಎಲ್ಲ ಕಡೆ ಕಸದ ರಾಶಿ ಇದೆ, ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ, ನಗರದ ಆಡಳಿತ ನಡೆಸಲು ಆಗುತ್ತಿಲ್ಲ. ಇಂತಹ ವಿಫಲತೆಯನ್ನು ಒಪ್ಪಿಕೊಳ್ಳದೆ ಇಂತಹ ಯೋಜನೆ ತಂದಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಪೋಸ್ಟ್ ಮಾಡಿದ್ದವನ ವಿರುದ್ಧ FIR