ಬಳ್ಳಾರಿ: ಸಾಮಾನ್ಯವಾಗಿ ದೇವರ ವಿಗ್ರಹ, ಹಾವಿನ ಹುತ್ತಕ್ಕೆ ಭಕ್ತಿಯಿಂದ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ಜಿಲ್ಲೆಯ ಉಜ್ಜಿನಿ ಗ್ರಾಮದಲ್ಲಿ ಪುರಾತನ ದೇವಸ್ಥಾನದ ಗರ್ಭಗುಡಿ ಮತ್ತು ಅದರ ಗೋಪುರಕ್ಕೆ ತೈಲದಿಂದ ಅಭಿಷೇಕ ಮಾಡುವ ವಿಶಿಷ್ಠ ಸಂಪ್ರದಾಯ ಆಚರಣೆಯಲ್ಲಿದೆ.
ಜರಿಮಲೆ ಪಾಳೆಗಾರರು ಶಾಪ ವಿಮೋಚನೆಗಾಗಿ ಮರುಳಸಿದ್ದೇಶ್ವರ ದೇವಸ್ಥಾನದ ಶಿಖರಕ್ಕೆ ತೈಲ ಅಭೀಷೇಕ ಮಾಡುತ್ತಾ ಬಂದಿದ್ದಾರೆ ಎಂದು ಹೇಳಲಾಗುತ್ತದೆ. ಇಂದಿಗೂ ಜರಿಮಲೆ ನಾಯಕರು ಕುಂಬದಲ್ಲಿ ಕಳಿಸುವ ಎಣ್ಣೆಯನ್ನು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತಂದು ಶಿಖರಕ್ಕೆ ಮೊದಲು ಎರೆವ ಮೂಲಕವೇ ತೈಲಾಭೀಷೇಕ ಆರಂಭಗೊಳ್ಳುತ್ತದೆ. ನಂತರ ಪೀಠದ ಭಕ್ತರು ತಂದ ಡಬ್ಬೆ ಡಬ್ಬೆ ಎಣ್ಣೆಯನ್ನು ಸುಮಾರು 35 ಅಡಿ ಎತ್ತರದ ಶಿಖರದ ಮೇಲೆ ಎರೆಯುತ್ತಾರೆ. ಸಂದು ಗೊಂದುಗಳಿಗೆ ಎಣ್ಣೆಯನ್ನು ಸ್ಪ್ರೇ ಮಾಡುತ್ತಾರೆ. ಹೀಗೆ ಇಡೀ ಗೋಪುರ ಗರ್ಭಗುಡಿಯನ್ನು ತೈಲದಿಂದ ಅಭಿಷೇಕ ಮಾಡಲಾಗುತ್ತದೆ.
ದೇವಸ್ಥಾನದ ಇತಿಹಾಸ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದು ಉಜ್ಜಯನಿ ಸದ್ಧರ್ಮ ಪೀಠ. ಪೀಠದ ಮೂಲ ಪುರುಷ ಶಂಭುಮುನಿ ಶಿವಾಚಾರ್ಯ ಮುನಿಗಳು ಕಲ್ಯಾಣ ಚಾಲುಖ್ಯರ ಆರನೇ ವಿಕ್ರಮಾದಿತ್ಯನ ಸಹಕಾರದಿಂದ 11 ನೇ ಶತಮಾನದಲ್ಲಿ ಈ ಮರುಳ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿದರು. ಅಂದಿನಿಂದ ಇಂದಿನವರೆಗೆ ಪೀಠದ ಮೂಲ ಪುರುಷರಾದ ದ್ವಾರುಕಾಚಾರ್ಯರ ಜಯಂತಿ ನಿಮಿತ್ತ ರಥೋತ್ಸವದ ಮರುದಿನ ದೇವಸ್ಥಾನದ ಗರ್ಭಗುಡಿ ಗೋಪುರಕ್ಕೆ ತೈಲ ಅಭಿಷೇಕ ಮಾಡಲಾಗುತ್ತಿದೆ. ಇದು ಭಾರತದಲ್ಲೇ ಅಪೂರ್ವ ಪರಂಪರೆಯ ಪ್ರತೀಕವಾಗಿದೆ.
ಅಭಿಷೇಕ ಯಾಕೆ?
ಮೃದವಾದ ಬಳಪದ ಕಲ್ಲಿನಿಂದ ಕೆತ್ತಿದ ಶಿಲ್ಪಗಳಿಂದ ಕೂಡಿದ್ದ ನಯನ ಮನೋಹರವಾದ ಗೋಪುರ ಬಿಸಿಲನ ತಾಪಕ್ಕೆ ಶಿಥಿಲವಾಗಬಾರದೆಂದು ಈ ರೀತಿ ತೈಲ ಅಭಿಷೇಕವನ್ನು ಮಾಡಲಾಗುತ್ತಿದೆ ಎನ್ನುವ ನಂಬಿಕೆ ಇದೆ. 60 ಕ್ಕೂ ಹೆಚ್ಚು ಯುವಕರು ಈ ಕಾರ್ಯ ನೆರವೇರಿಸುತ್ತಾರೆ. ಅಭಿಷೇಕದ ನಂತರ ಕೆಳಗೆ ಬಿದ್ದ ಎಣ್ಣೆಯನ್ನು ಸ್ಥಳೀಯ ಪೂಜಾರು ಜನಾಂಗ ಬಳಿದುಕೊಂಡು ಮನೆಗೆ ಒಯ್ಯತ್ತಾರೆ. ಇನ್ನು ಕೆಲವರು ಈ ಎಣ್ಣೆಯನ್ನು ಒಯ್ದು ತಮ್ಮ ಮನೆಯ ದೀಪ ಬೆಳಗಿಸುತ್ತಾರೆ.
ಸಂಜೆ ವೇಳೆ ನಡೆಯುವ ಈ ಕಾರ್ಯಕ್ರಮ ನೋಡಲು ನಾಡಿನ ವಿವಿಧಡೆಯಿಂದ ಜನತೆ ಹಿಂಡು ಹಿಂಡಾಗಿ ಬರುತ್ತಾರೆ. ದೇವಸ್ಥಾನದ ಸುತ್ತಮುತ್ತಲಿನ ಆವರಣ, ಮಾಳಿಗೆಗಳ ಮೇಲೆ ನಿಂತು, ಕುಳಿತು ನೋಡುತ್ತಾರೆ. ಜೊತೆಗೆ ತೈಲ ಅಭಿಷೇಕ ಆಂಭಗೊಳ್ಳುತ್ತಿಂದ್ದಂತೆ ಬಾಳೆ ಹಣ್ಣು ಎಸೆಯುತ್ತಾರೆ. ತೈಲ ಅಭೀಷೇಕದ ಸಂಪ್ರದಾಯದಿಂದ ಗೋಪುರದ ಶಿಲ್ಪಕಲೆಯ ಸೌಂದರ್ಯ ಕಾಣದಾಗಿ ಬರೀ ಮೇಣ ಮೆತ್ತಿದಂತೆ ಮನೋಹರವಾಗಿ ಕಾಣುತ್ತದೆ.