ರಾಜ್ಯದ ಹಲವೆಡೆ ವರುಣನ ಆರ್ಭಟ – ಮಳೆಗೆ 7 ಮಂದಿ ಬಲಿ, ಮನೆಗಳಿಗೆ ನುಗ್ಗಿದ ನೀರು

Public TV
2 Min Read
Karnataka Rain

ಬೆಂಗಳೂರು: ರಾಜ್ಯದ ಹಲವಡೆ ತಡರಾತ್ರಿ ವರುಣನ ಅಬ್ಬರ ಜೋರಾಗಿತ್ತು. ಧಾರಾಕಾರ ಮಳೆಗೆ (Rain) ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು, ಮತ್ತೆ ಕೆಲವೆಡೆ ಅವಾಂತರ ಸೃಷ್ಟಿಯಾಗಿತ್ತು.. ಇನ್ನೂ ಕೆಲವೆಡೆ ಮಳೆಯ ಆರ್ಭಟಕ್ಕೆ 7 ಜೀವಗಳು ಬಲಿಯಾಗಿವೆ.

ಹೌದು. ಮಂಗಳವಾರ (ಮೇ 14) ರಾತ್ರಿ ಸುರಿದ ಧಾರಾಕಾರ ಮಳೆಗೆ ಅವಾಂತರವೇ ಸೃಷ್ಟಿಯಾಗಿತ್ತು. ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರಕ್ಕೆ 7 ಜನ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವೆಡೆ ಮನೆಗೆಳಿಗೆ ನೀರು ನುಗ್ಗಿದ್ದು ಅವಾಂತರವೇ ಸೃಷ್ಠಿಯಾಗಿದೆ.

Karnataka Rain 5

ಬಳ್ಳಾರಿ (Ballari):
ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಧಾರುಣವಾಗಿ ಮೃತಪಟ್ಟಿದ್ದಾರೆ. ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ರಾರಾವಿ ಗ್ರಾಮದ ಭೀರಪ್ಪ, ಸುನೀಲ ಮೃತ ದುರ್ದೈವಿಗಳಾಗಿದ್ದು, ವಿನೋದ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

ರಾಯಚೂರು (Raichur):
ಜಿಲ್ಲೆಯಲ್ಲಿ ವಿವಿಧೆಡೆ ಗುಡುಗು ಸಹಿತ ಮಳೆ ಆಗಿದೆ. ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ. ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ರೈತ ಲಿಂಗಪ್ಪ ಮೃತಪಟ್ಟಿದ್ದಾರೆ.

Karnataka Rain 4

ಹಾವೇರಿ/ಕೊಪ್ಪಳ/ಚಿಕ್ಕಮಗಳೂರು:
ಹಾವೇರಿಯ (Haveri) ರಟ್ಟಿಹಳ್ಳಿ ತಾಲ್ಲೂಕಿನ ಕುಡಪಲಿ ಗ್ರಾಮದಲ್ಲೂ ಸಿಡಿಲು ಬಡಿದು ರೈತ ಸುನೀಲ್ ಕಾಳೇರ್ ಸಾವನ್ನಪ್ಪಿದ್ದಾರೆ. ಇನ್ನೂ ಕೊಪ್ಪಳದಲ್ಲೂ ಕನಕಗಿರಿ ತಾಲೂಕಿನ ಹುಲಿಹೈದರದಲ್ಲಿ ಸಿಡಿಲು ಬಡಿದು ಯಂಕಪ್ಪ ಜಾಡಿ ಎಂಬ ರೈತ ಮೃತಪಟ್ಟಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಸಿಡಿಲು ಬಡಿದು ಕುರಿಗಾಯಿ ಲೋಕೇಶಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಗಣೇಶ ನಗರ, ಆನಂದನಗರದಲ್ಲಿ ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಜನರು ಪರದಾಡಿದ್ದಾರೆ. ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಳೆ ನೀರಿನಲ್ಲಿ ಟೆಂಪೊ ಟ್ರಾವೆಲ್ ವಾಹನ ಮುಳುಗಿತ್ತು.

Karnataka Rain 2

ಬೆಳಗಾವಿ: ಚರಂಡಿಯಲ್ಲಿ ಕೊಚ್ಚಿಹೋದ ವ್ಯಕ್ತಿ
ಬೆಳಗಾವಿಯಲ್ಲಿ ವಿವಿಧ ಬಡಾವಣೆಗಳು ಜಲಾವೃತವಾಗಿದೆ. ನಿರಂತರ ಮಳೆಗೆ ಚರಂಡಿಯಲ್ಲಿ ಕಾಶಪ್ಪ ಶಿರಟ್ಟಿ ಎಂಬಾತ ಕೊಚ್ಚಿ ಹೋಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಯಿಂದ ತುಂಬಿ ಹರಿಯುತ್ತಿರುವ ಚರಂಡಿಗಳಿಂದ ಅವಾಂತರವಾಗಿದೆ. ಜೊತೆಗೆ ಗೋಕಾಕ್ ನಗರದ ರೈಲ್ವೇ ನಿಲ್ದಾಣ ಬಳಿಯೂ ರಸ್ತೆಗಳು ಕೆರೆಯಂತೆ ಹರಿದಿವೆ.

ಗದಗ: ಹಳ್ಳದ ನೀರಲ್ಲಿ ಕೊಚ್ಚಿಹೋದ ಬೈಕ್ ಸವಾರ
ಗದಗ ಜಿಲ್ಲೆಯ ಹಲವೆಡೆಯೂ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೆನಕೊಪ್ಪ ಗ್ರಾಮದ ಬಳಿ ಹಳ್ಳದಲ್ಲಿ ಬೈಕ್ ಸಮೇತ ಸವಾರ ಕೊಚ್ಚಿ ಹೋಗಿರುವ ಶಂಕೆ ಇದೆ. ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಆತಂಕ ಮೂಡಿಸಿದೆ.

Share This Article