ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ದ್ವೀಪವೊಂದರಲ್ಲಿ 60 ವರ್ಷಗಳ (1963) ಹಿಂದೆ ಮುಚ್ಚಲ್ಪಟ್ಟ ಅಲ್ಕಾಟ್ರಾಜ್ ಜೈಲನ್ನು (Alcatraz Jail) ತೆರೆಯಲು ಅಮೆರಿಕ (United States) ಅಧ್ಯಕ್ಷ ಟ್ರಂಪ್ (Donald Trump) ಮತ್ತೆ ಮುಂದಾಗಿದ್ದಾರೆ. ಈ ಜೈಲನ್ನು ಮತ್ತೆ ತೆರೆಯುವುದು ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯದ ಸಂಕೇತ ಎಂದು ಅವರು ಹೇಳಿಕೊಂಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಅಲ್ಕಾಟ್ರಾಜ್ ಜೈಲನ್ನು ಆ ಕಾಲಘಟ್ಟದಲ್ಲಿ ಅತ್ಯಂತ ಕಠಿಣ ಜೈಲುಗಳಲ್ಲಿ ಒಂದಾಗಿತ್ತು ಎಂದು ಪರಿಗಣಿಸಲಾಗಿತ್ತು. ಈ ಜೈಲು ಮೂಲತಃ ಅಲ್ಕಾಟ್ರಾಜ್ ದ್ವೀಪದ ರಕ್ಷಣಾ ಕೋಟೆಯಾಗಿತ್ತು. ಅಂತರ್ಯುದ್ಧದ ಸಮಯದಲ್ಲಿ, ಇದನ್ನು ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು. ಇದು ಸುಮಾರು 22 ಎಕರೆ ವಿಸ್ತೀರ್ಣ ಹೊಂದಿದ್ದು, ಅಮೆರಿಕದ ಕುಖ್ಯಾತ ದರೋಡೆಕೋರ ಅಲ್ ಕಾಪೋನ್ ಸೇರಿದಂತೆ ಕೆಲವು ಕುಖ್ಯಾತ ಅಪರಾಧಿಗಳನ್ನು ಇಲ್ಲಿ ಇರಿಸಲಾಗಿತ್ತು.
ಈ ಜೈಲು ಅದೆಷ್ಟು ಭದ್ರವಾಗಿತ್ತು ಎಂದರೆ, ವಿಶ್ವದ ಅಪಾಯಕಾರಿ ಕೈದಿಗಳು ಸಹ ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಈ ಜೈಲಿನಲ್ಲಿದ್ದ ಕೈದಿಗಳಿಗೆ ಕೋಲು ಹಿಡಿದು ಕಾಯುವ ಪೊಲೀಸರು ಇರಲಿಲ್ಲ, ಬದಲಿಗೆ ಶಾರ್ಕ್ ಮೀನುಗಳೇ ಈ ಜೈಲಿನ ಕಾವಲು ಕಾಯುತ್ತಿದ್ದವು. ಇಂತಹ ಜೈಲು 3 ಬಾರಿ ಪ್ರವಾಹಕ್ಕೆ ತುತ್ತಾಗಿದ್ದರಿಂದ ಗೋಡೆಗಳೆಲ್ಲ ಹಾನಿಗೊಳಗಾಗಿತ್ತು. ಅಲ್ಲದೇ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣದಿಂದ 1963ರಲ್ಲಿ ಈ ಜೈಲನ್ನು ಬಂದ್ ಮಾಡಲಾಗಿತ್ತು.
ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಟ್ರಂಪ್ ಈ ಜೈಲನ್ನು ಮತ್ತೆ ತೆರೆಯಲು ಪ್ಲ್ಯಾನ್ ಮಾಡಿದ್ದಾರೆ. ಈಗ ಪ್ರವಾಸಿ ತಾಣವಾಗಿರುವ ಈ ಕೋಟೆಯನ್ನು ಮತ್ತೆ ಜೈಲನ್ನಾಗಿ ಮಾಡಿ, ಮತ್ತಷ್ಟು ವಿಸ್ತರಿಸಲು ಅವರು ಆದೇಶಿಸಿದ್ದಾರೆ. ಈ ಜೈಲನ್ನು ಅತ್ಯಂತ ಕ್ರೂರಿಗಳನ್ನು ಇರಿಸುವುದಾಕ್ಕಾಗಿ ಮತ್ತೆ ತೆರೆಯಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಟ್ರಂಪ್ ಅಲ್ಕಾಟ್ರಾಜ್ ರೀ ಓಪನ್ ಬಗ್ಗೆ ಹೇಳಿದ್ದೇನು?
ಅಲ್ಕಾಟ್ರಾಜ್ ಜೈಲಿನಲ್ಲಿ ಅತ್ಯಂತ ಕ್ರೂರಿಗಳನ್ನು ಇರಿಸಲಾಗುತ್ತದೆ. ಕೆಲಸಕ್ಕಾಗಿ ಹಾಗೂ ನಮ್ಮ ದೇಶಕ್ಕೆ ಅಕ್ರಮವಾಗಿ ಬಂದ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅವಕಾಶವಿದೆ. ಗೂಂಡಾಗಳಿಗೆ ನಾವಿನ್ನು ಮುಂದೆ ಹೆದರುವುದಿಲ್ಲ. ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಬಹಳ ಸಮಯದಿಂದ, ಅಮೆರಿಕವು ಕ್ರೂರ, ಹಿಂಸಾತ್ಮಕ ಮತ್ತು ಪುನರಾವರ್ತಿತ ಅಪರಾಧಿಗಳಿಂದ ಬಳಲುತ್ತಿದೆ. ಅಂತಹ ಕ್ರಿಮಿನಲ್‌ಗಳು ಸಮಾಜದ ಕಸ, ಅವರು ಸಮಾಜಕ್ಕೆ ದುಃಖವನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡುವುದಿಲ್ಲ. ಅದಕ್ಕಾಗಿ ಈ ಜೈಲು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಕಾಟ್ರಾಜ್ ಕೋಟೆ ಜೈಲಾಗಿದ್ದು ಹೇಗೆ?
ಅಲ್ಕಾಟ್ರಾಜ್ ಜೈಲು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿದೆ. ಒಂದು ಕಾಲದಲ್ಲಿ ಕೋಟೆಯಾಗಿದ್ದ ಇದನ್ನು 1912ರಲ್ಲಿ ಯುಎಸ್ ಸೈನ್ಯದ ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು.
ಅಲ್ಕಾಟ್ರಾಜ್ ಯಾಕಿಷ್ಟು ಭದ್ರ ಗೊತ್ತಾ?
ಮೂರು ಅಂತಸ್ತಿನ ಈ ಜೈಲು ಅಮೆರಿಕದಿಂದ ಬೌಗಳಿಕ ಪ್ರದೇಶದ ಸಂಪರ್ಕವಿಲ್ಲದೇ ಪ್ರತ್ಯೇಕವಾಗಿದೆ. ಸುತ್ತ ಸಮುದ್ರ ವ್ಯಾಪಿಸಿದ್ದು, ಭಾರೀ ಅಲೆಗಳು ಮತ್ತು ಶಾರ್ಕ್ ಮೀನುಗಳ ಹಾವಳಿಯಿಂದ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳವುದು ಅಸಾಧ್ಯವಾಗಿತ್ತು. ಅಕಸ್ಮಾತ್ ತಪ್ಪಿಕೊಂಡ್ರೆ ಅಪರಾಧಿಗಳು ಶಾರ್ಕ್‌ಗಳಿಗೆ ಊಟವಾಗಬೇಕಿತ್ತು!
ಈ ಜೈಲು ನಾಲ್ಕು ಸೆಲ್ ಬ್ಲಾಕ್‌ಗಳು, ವಾರ್ಡನ್ ಕಚೇರಿ, ಸಂದರ್ಶಕರ ಕೊಠಡಿ, ಗ್ರಂಥಾಲಯ ಮತ್ತು ಕ್ಷೌರಿಕರ ಕೊಠಡಿಯನ್ನು ಒಳಗೊಂಡಿತ್ತು. ಅತ್ಯಂತ ಅಪಾಯಕಾರಿ ಕೈದಿಗಳನ್ನು ಡಿ-ಬ್ಲಾಕ್‌ನಲ್ಲಿ ಇರಿಸಲಾಗುತ್ತಿತ್ತು. 1934ರಲ್ಲಿ ಜೈಲು ಕಟ್ಟಡವನ್ನು ನವೀಕರಿಸಿದಾಗ ಅದರ ಕಬ್ಬಿಣದ ಮೆಟ್ಟಿಲುಗಳು, ಗನ್ ಇಡಲು ಗ್ರಾನೈಟ್ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈ ಜೈಲಿನಲ್ಲಿದ್ದ ರಾಬರ್ಟ್ ಫ್ರಾಂಕ್ಲಿನ್ ಎಂಬ ಅಪರಾಧಿ ಜೈಲು ಸಿಬ್ಬಂದಿಯನ್ನೇ ಹತ್ಯೆಗೈದಿದ್ದ.
ಜೈಲಿನ ನಿವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಈ ಜೈಲನ್ನು 1963ರಲ್ಲಿ ಮುಚ್ಚಲಾಯಿತು. ಬಳಿಕ ಯುಎಸ್ ಸರ್ಕಾರವು 1972ರಲ್ಲಿ ಈ ದ್ವೀಪವನ್ನು ರಾಷ್ಟ್ರೀಯ ಉದ್ಯಾನವನ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿತು. ಬಳಿಕ ಇದು ಗೋಲ್ಡನ್ ಗೇಟ್ ಎಂಬ ಹೆಸರಿನ ಪ್ರವಾಸಿ ಸ್ಥಳವಾಗಿ ಹೆಸರಾಯಿತು.
36 ಕೈದಿಗಳಿಂದ ತಪ್ಪಿಸಿಕೊಳ್ಳೋಕೆ ಯತ್ನ!
ಇಂತಹ ಭದ್ರ ಜೈಲಿಂದ 36 ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದರಲ್ಲಿ ಹೆಚ್ಚಿನ ಕೈದಿಗಳನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 1962 ರಲ್ಲಿ ಫ್ರಾಂಕ್ ಮೋರಿಸ್ ಮತ್ತು ಆಂಗ್ಲಿನ್ ಸಹೋದರರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆ ಇಬ್ಬರೂ ಏನಾದರೂ ಎಂಬುದು ಇಂದಿಗೂ ತಿಳಿದು ಬಂದಿಲ್ಲ.