ನವದೆಹಲಿ: ಒಂದು ಕಡೆ ಮಾಕ್ ಡ್ರಿಲ್‌ಗೆ ಸೂಚನೆ, ಇನ್ನೊಂದು ಸಮರಾಭ್ಯಾಸ ಪೋಸ್ಟ್, ಮತ್ತೊಂದು ಕಡೆ ನೌಕಾ ದಳದಿಂದ ಕ್ಷಿಪಣಿ ಪ್ರಯೋಗ… ಹೀಗೆ ಅಭ್ಯಾಸ ಮಾಡುತ್ತಿದ್ದಾಗ ಭಾರತ (India) ಯಾವ ರೀತಿ ಪ್ರತೀಕಾರ ತೀರಿಸುತ್ತದೆ ಎಂಬ ಪ್ರಶ್ನೆ ಎದ್ದಿತ್ತು. ಭಾರತ ದಾಳಿ ನಡೆಸಿದರೆ ಅಣು ಬಾಂಬ್ ಹಾಕುತ್ತೇವೆ. ಕ್ಷಿಪಣಿ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನ ಬೆದರಿಸಿತ್ತು. ಈ ಬೆದರಿಕೆಗೆ ಜಗ್ಗದ ಭಾರತ ಮಧ್ಯರಾತ್ರಿ ಪಾಕ್ ಮಲಗಿದ್ದಾಗ ಆಪರೇಷನ್ ಸಿಂಧೂರ (Operation Sindhura) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ.
ಈ ಕಾರ್ಯಾಚರಣೆಗೆʼಆಪರೇಷನ್ ಸಿಂಧೂರʼ ಹೆಸರನ್ನು ಸೂಚಿಸಿದ್ದೇ ಪ್ರಧಾನಿ ಮೋದಿ. ಸಿಂಧೂರ ಎಂದರೆ ಶಕ್ತಿಯ ಸಂಕೇತ. ಏಪ್ರಿಲ್ 22ರಂದು ಪಹಲ್ಗಾಮ್ ದಾಳಿ ಬಳಿಕ ಒಬ್ಬ ಉಗ್ರನನ್ನೂ ಬಿಡುವುದಿಲ್ಲ. ಊಹೆಗೂ ನಿಲುಕದ ರೀತಿ ಬೆಲೆ ತೆರಬೇಕಾಗುತ್ತೆ ಅಂತ ಬಿಹಾರದಲ್ಲಿ ಪ್ರಧಾನಿ ಮೋದಿ ಗುಡುಗಿದ್ದರು. ಆ ಬಳಿಕ ವಾರ್ ರೂಂನಲ್ಲಿ ಕುಳಿತ ಮೋದಿ ಬ್ಯಾಕ್ ಟು ಬ್ಯಾಕ್ ಮ್ಯಾರಥಾನ್ ಸಭೆಗಳನ್ನು ನಡೆಸಿದ್ದರು. ಆ ಮೂಲಕ ಆಪರೇಷನ್ ಸಿಂಧೂರ ಕಾರ್ಯರೂಪಕ್ಕೆ ಪ್ಲಾನ್ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪ್ಲಾನ್ ನಡೆದಿದ್ದೇಗೆ?
ಉಗ್ರರ 21 ಅಡುಗುತಾಣ ಭಾರತದ ಗುಪ್ತಚರ ಇಲಾಖೆ ಗುರುತಿಸಿತ್ತು. ಏ.29 ರಂದು ಮೋದಿ ಮೊದಲ ಉನ್ನತ ಮಟ್ಟದ ಸಭೆ ನಡೆಸಿದರು. ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಭೂಸೇನೆ, ವಾಯುಸೇನೆ, ನೌಕಾಸೇನೆಯ ಮುಖ್ಯಸ್ಥರು ಭಾಗಿಯಾಗಿದ್ದರು. ಸಶಸ್ತ್ರ ಪಡೆಗಳಿಗೆ ಪರಮಾಧಿಕಾರ ನೀಡಿದ ಮೋದಿ ಪಾಕ್‌ಗೆ ನುಗ್ಗಿ ಹೊಡೆಯಬೇಕು ಎಂದು ಸೂಚಿಸಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್!
ಮೇ 3 ರಂದು ಮೋದಿ ಎರಡನೇ ಉನ್ನತ ಮಟ್ಟದ ಸಭೆ ನಡೆಸಿದರು. ಪಾಕ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿಗೆ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ದಾಳಿ ನಡೆಸಲು ಆಯ್ಕೆಯಾದ ಅಧಿಕಾರಿಗಳನ್ನು ಸೌತ್ ಬ್ಲಾಕ್‌ನಲ್ಲಿ ಇರಿಸಲಾಗಿತ್ತು. ಅಧಿಕಾರಿಗಳಿಗೆ ಯಾರ ಸಂಪರ್ಕವೂ ಇಲ್ಲದಂತೆ ಕ್ವಾರಂಟೈನ್ ಮಾಡಲಾಗಿತ್ತು.
ಮೇ 5 ರಂದು ಅಜಿತ್ ದೋವಲ್ ಅವರು ಉಗ್ರರ ವಿರುದ್ಧದ ಕಾರ್ಯಾಚರಣೆ ಹೇಗೆ ನಡೆಸಬೇಕು ಎಂಬುದರ ಬಗ್ಗೆ ವಿವರಣೆ ನೀಡಿದರು. ವಿವರಣೆ ಒಪ್ಪಿಗೆ ಸೂಚಿಸಿದ ಮೋದಿ ಆಪರೇಷನ್ ಸಿಂಧೂರ ಅನುಮತಿ ನೀಡಿದ ಬಳಿಕ ಮೇ 6 ಮತ್ತು 7 ರ ಮಧ್ಯರಾತ್ರಿ ಆಪರೇಷನ್ ಸಿಂಧೂರಕ್ಕೆ ಮುಹೂರ್ತ ಫಿಕ್ಸ್ ಆಯ್ತು. ಈ ಮುಹೂರ್ತದಂತೆ ವಾಯುನೆಲೆಯಿಂದ ಮಧ್ಯರಾತ್ರಿ ಹಾರಿದ ರಫೇಲ್ ವಿಮಾನಗಳು ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿ ಮರಳಿತು. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಪಾಕ್ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ವ್ಯವಹಾರವೇ ಸ್ಥಗಿತ
ಮೇ 7 ರ ಮಧ್ಯರಾತ್ರಿ 1:51ಕ್ಕೆ ಪಹಲ್ಗಾಮ್ ನರಮೇಧಕ್ಕೆ Justice is Served ಜೈ ಹಿಂದ್ ಎಂದು ಎಡಿಜಿಪಿ ಇಂಡಿಯನ್ ಆರ್ಮಿ ಪೋಸ್ಟ್ ಮಾಡುವ ಮೂಲಕ ವಿಶ್ವಕ್ಕೆ ಅಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆಅಧಿಕೃತವಾಗಿ ತಿಳಿಸಿತು.