ನವದೆಹಲಿ: ನಾಳೆ ಮಾಕ್ ಡ್ರಿಲ್ ಸಿದ್ಧತೆ ಒಂದ್ಕಡೆಯಾದರೆ, ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ (PM Modi) ಬೆಳಗ್ಗೆ 11 ಗಂಟೆಗೆ ಮಹತ್ವದ ಸಂಪುಟ ಸಭೆ ಕರೆದಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಸರಣಿ ಸಭೆ ನಡೆಸಿರುವ ಪ್ರಧಾನಿ, ನಾಳಿನ ಸಂಪುಟ ಸಭೆಯಲ್ಲಿ (Cabinet Meeting) ಯುದ್ಧಕ್ಕೆ ಒಪ್ಪಿಗೆ ಪಡೆಯೋ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ನಾಳೆ ಹಾಗೂ ನಾಡಿದ್ದು ವಾಯುಪಡೆ ಹೈ ಅಲರ್ಟ್ ಘೋಷಣೆ ಮಾಡಿದೆ. ಪಾಕ್ ಗಡಿಭಾಗದಲ್ಲಿ ವಾಯುಪಡೆ ತಾಲೀಮು ನಡೆಸಲಿದೆ. ಹೀಗಾಗಿ, ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಉಗ್ರರ ದಾಳಿ ಬಗ್ಗೆ ಮೋದಿಗೆ ಮೊದಲೇ ಮಾಹಿತಿ ಇತ್ತು, ಅದಕ್ಕೆ ಕಾಶ್ಮೀರ ಭೇಟಿ ರದ್ದು ಮಾಡಿದ್ದರು: ಖರ್ಗೆ ಆರೋಪ
ಯುದ್ಧದ ಉದ್ವಿಗ್ನತೆ ಇರುವ ಹಿನ್ನೆಲೆ ದೇಶದ ಪ್ರಮುಖ ದೇವಸ್ಥಾನಗಳ ಭದ್ರತೆ ಹೇಗಿದೆ ಎಂದು ಎನ್‌ಎಸ್‌ಜಿ ಕಮಾಂಡೋಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇವತ್ತು ಪುರಿ ಜಗನ್ನಾಥ ದೇವಸ್ಥಾನದ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಎಲ್‌ಒಸಿ ಉದ್ದಕ್ಕೂ ಬಂಕರ್‌ಗಳನ್ನ ಸಿದ್ಧಗೊಳಿಸಲಾಗ್ತಿದೆ. ಉರಿಯಿಂದ ನೌಶೇರಾ ವಲಯವರೆಗೂ ಬಂಕರ್ ಸಿದ್ಧಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿವಾಸಿಗಳು ಬಂಕರ್ ಆಶ್ರಯ ಪಡೆಯಲು ಬಂಕರ್ ವ್ಯವಸ್ಥೆ ಮಾಡಲಾಗಿದೆ.
ಪಂಜಾಬ್‌ನ ಅಮೃತಸರ ಬಳಿ ಭಯೋತ್ಪಾದಕ ಕೃತ್ಯಕ್ಕೆ ಬಳಸುತ್ತಿದ್ದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ರಾಕೆಟ್ ಚಾಲಿತ ಗ್ರೆನೇಡ್, ವೈಯರ್ ಲೆಸ್ ಟೆಲಿ ಕಮ್ಯೂನಿಕೇಷನ್ ಸೆಟ್, ಹ್ಯಾಂಡ್ ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ. ಇನ್ನು ಕಾಶ್ಮೀರದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರು ಮತ್ತು ಒಬ್ಬ ಪಾಕ್ ನಾಗರಿಕನನ್ನ ಬಂಧಿಸಲಾಗಿದೆ. ಇದನ್ನೂ ಓದಿ: ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?
ಶಂಕಿತ ಉಗ್ರರಿಂದ ಪಿಸ್ತೂಲ್, ಗ್ರೆನೇಡ್ ಮತ್ತು 15 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ತಾನದಲ್ಲಿ ಪಾಕ್ ಗೂಢಚಾರನನ್ನು ಬಂಧಿಸಲಾಗಿದೆ. ಯುದ್ಧದ ಕಾರ್ಮೋಡ ತೀವ್ರಗೊಳ್ಳುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳ ಜೊತೆಗೆ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಈ ನಡುವೆ ಭಾರತದ ಬೆನ್ನಿಗೆ ಅಮೆರಿಕ ನಿಂತಿದೆ. ಅಮೆರಿಕ ಸಂಸತ್‌ನ ಸ್ಪೀಕರ್ ಜಾನ್ಸನ್, ಉಗ್ರರ ವಿರುದ್ಧ ಹೋರಾಡಲು ಟ್ರಂಪ್ ಸರ್ಕಾರ ಭಾರತಕ್ಕೆ ಶಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ಸಹಾಯ ಮಾಡುತ್ತೆ ಎಂದಿದ್ದಾರೆ.