ಚಿತ್ರದುರ್ಗ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋತಿದ್ದಕ್ಕೆ ಸಿಟ್ಟುಗೊಂಡು ವಿದ್ಯಾರ್ಥಿಗಳು ಹಾಸ್ಟೆಲ್ ಸಾಮಗ್ರಿಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಹೊರವಲಯದಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು. ಹಾಸ್ಟೆಲ್‌ನಲ್ಲಿ ಸಿಎಸ್‌ಕೆ ಫ್ಯಾನ್ಸ್ ರೊಚ್ಚಿಗೆದ್ದು, ಹಾಸ್ಟೆಲ್‌ನಲ್ಲಿರುವ ತಟ್ಟೆ, ಲೋಟ ಮತ್ತು ಟ್ರಂಕ್ ಸೇರಿದಂತೆ ಸರ್ಕಾರಿ ಹಾಸ್ಟೆಲ್‌ಗೆ ಸೇರಿದ ಹಲವು ಸಾಮಗ್ರಿಗಳನ್ನು ಎತ್ತಿ ಹಾಕಿ ದಾಂಧಲೆ ಮಾಡಿದ್ದಾರೆ.
ಐಪಿಎಲ್ ಶುರುವಾದಾಗಿನಿಂದಲೂ ಈ ಹಾಸ್ಟೆಲ್‌ನಲ್ಲಿ ಇಂತಹ ಘಟನೆ ಮಾಮೂಲಿಯಾಗಿದ್ದು, ಐಪಿಎಲ್ ಪ್ರಿಯರ ಆಟೋಟೋಪಗಳಿಂದ ಇಲ್ಲಿ ಓದುತ್ತಿರುವ ಪ್ರಾಮಾಣಿಕ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಈ ವರ್ತನೆಯನ್ನು ತಹಬದಿಗೆ ತರಲು ಇಲ್ಲಿರುವ ವಾರ್ಡನ್ ಸಹ ಮುಂದಾಗಿಲ್ಲ ಎಂಬುದು ಹಲವು ವಿದ್ಯಾರ್ಥಿಗಳ ಆರೋಪವಾಗಿದೆ.
ಇಲ್ಲಿರುವ ವಿದ್ಯಾರ್ಥಿಗಳಿಗೆ ಐಪಿಎಲ್ ಬೆಟ್ಟಿಂಗ್ ಗೀಳು ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ಇಂತಹ ರಂಪಾಟ ಮಾಡುವ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಕಲಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆಂಬ ಆರೋಪ ಇಲ್ಲಿನ ಪ್ರಾಮಾಣಿಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರದ್ದಾಗಿದೆ.