ನವದೆಹಲಿ: ಪಹಲ್ಗಾಮ್‌ನಲ್ಲಿ ನರಮೇಧ (Pahalgam Attack) ಮಾಡುವ ಮೊದಲೇ ಉಗ್ರರು ಕಣವೆ ರಾಜ್ಯದಲ್ಲಿ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ (Intelligence Report) ಎಚ್ಚರಿಕೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು.ಶ್ರೀನಗರ (Srinagara) ಮತ್ತು ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ (Hotel) ತಂಗಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆ ಮತ್ತು ಸರ್ಕಾರಕ್ಕೆ ಗುಪ್ತಚರ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
ಕಾತ್ರಾದಿಂದ ಶ್ರೀನಗರವನ್ನು ಸಂಪರ್ಕಿಸುವ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏ.19 ರಂದು ಚಾಲನೆ ನೀಡಬೇಕಿತ್ತು. ಈ ದಿನವೇ ಉಗ್ರರು ಕೃತ್ಯ ಎಸಗಿಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ನಿಗದಿಯಾಗಿದ್ದ ಈ ಕಾರ್ಯಕ್ರಮ ರದ್ದಾಗಿತ್ತು. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆ ನಡುವೆ ಪಾಕ್ ರೇಂಜರ್‌ನನ್ನ ಬಂಧಿಸಿದ ಬಿಎಸ್‌ಎಫ್
ದಾಳಿಯ ಬೆದರಿಕೆಯನ್ನು ಪರಿಗಣಿಸಿ ಶ್ರೀನಗರದ ದಾಲ್ ಸರೋವರ ಮತ್ತು ಮೊಘಲ್ ಉದ್ಯಾನವನದ ಮೇಲಿರುವ ಜಬರ್ವಾನ್ ಶ್ರೇಣಿಯ ತಪ್ಪಲಿನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.
ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಪೊಲೀಸ್ ಅಧಿಕಾರಿಗಳು ದಾಳಿಗೆ ಕೆಲವು ದಿನಗಳ ಮೊದಲು ಕಣಿವೆಯಲ್ಲಿ ಬೀಡುಬಿಟ್ಟಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಅನ್ವಯ ಪಹಲ್ಗಾಮ್ ದಾಳಿಗೆ 10-15 ದಿನಗಳ ಮೊದಲು ಶ್ರೀನಗರದ ಹೊರವಲಯದಲ್ಲಿರುವ ಡಚಿಗಾಮ್, ನಿಶಾತ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಯಾವುದೇ ಫಲಿತಾಂಶ ಸಿಗದ ಕಾರಣ ಏ. 22ರಂದು ಶೋಧ ಕಾರ್ಯಾಚರಣೆ ನಿಲ್ಲಿಸಲಾಯಿತು. ಅದೇ ದಿನ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.