ಬೆಂಗಳೂರು: ನಗರದ (Bengaluru) ಕತ್ರಿಗುಪ್ಪೆಯಲ್ಲಿ 2 ದಿನಗಳ ಹಿಂದೆ ಬಿರುಗಾಳಿ ಮಳೆಗೆ (Rain) ಮರ ಬಿದ್ದು ಸಾವನ್ನಪ್ಪಿದ್ದ ಆಟೋ ಚಾಲಕನ ಅಂತ್ಯಸಂಸ್ಕಾರವನ್ನು ಆಟೋ ಚಾಲಕರ ಸೇನೆ ಮತ್ತು ಪೀಸ್ ಆಟೋ ಸಂಘಟನೆ ಸೇರಿ ನೆರವೇರಿಸಿವೆ.
ಆಟೋ ಚಾಲಕ ಮಹೇಶ್ ಅವರು ಹೋಗುತ್ತಿದ್ದಾಗ ಗಾಳಿಗೆ ಮರ ಬಿದ್ದಿತ್ತು. ಇದರಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅವರ ಅಂತ್ಯ ಸಂಸ್ಕಾರ 2 ದಿನ ಆದರೂ ಆಗಿರಲಿಲ್ಲ. ಮೃತ ಆಟೋ ಚಾಲಕನಿಗೆ ಮದುವೆ ಆಗಿಲ್ಲ, ಕುಟುಂಬಸ್ಥರು ಯಾರು ಅಂತ್ಯ ಸಂಸ್ಕಾರ ಮಾಡಲು ಮುಂದೆ ಬಂದಿರಲಿಲ್ಲ. ಈ ಬಗ್ಗೆ, ಆಟೋ ಸಂಘಟನೆಗಳು ಏನ್ ಮಾಡ್ತಿವೆ ಅಂತ ಬಿಗ್‍ಬುಲೆಟಿನ್‍ನಲ್ಲಿ ʻಪಬ್ಲಿಕ್ ಟಿವಿʼ ಆಟೋ ಚಾಲಕ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಆಟೋ ಚಾಲಕರ ಸೇನೆ ಮತ್ತು ಪೀಸೋ ಆಟೋ ಸಂಘ ಮುಂದೆ ಬಂದು ಮಹೇಶ್ ಅಂತ್ಯ ಸಂಸ್ಕಾರ ನೆರವೇರಿಸಿವೆ.
ಪೊಲೀಸರು ಮಹೇಶ್ ಪೋಷಕರನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆಸಿದ್ದು, ಅವರಿಗೆ ತೀರಾ ವಯಸ್ಸಾಗಿದೆ. ಅಂತ್ಯ ಸಂಸ್ಕಾರ ಮಾಡುವಷ್ಟು ಆರ್ಥಿಕ ಶಕ್ತಿ ಇಲ್ಲ. ಹಾಗಾಗಿ, ಆಟೋ ಚಾಲಕರ ಸೇನೆ ಮತ್ತು ಪೀಸ್ ಆಟೋ ಸಂಘಟನೆ ಮೈಸೂರು ರಸ್ತೆಯ ಗುಡ್ಡದಹಳ್ಳಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿವೆ. ಮೃತ ಮಹೇಶ್ ಎರಡು ಕಣ್ಣುಗಳನ್ನ ದಾನ ಮಾಡಿದ್ದಾರೆ.
ಮೇ 1 ರ ಸಂಜೆ ಸಿಕೆ ಅಚ್ಚುಕಟ್ಟು ಬಳಿಯ ಬಸ್ ನಿಲ್ದಾಣದ ಬಳಿ ಗಾಳಿ ಮಳೆಗೆ ಮರ ಆಟೋ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಇಟ್ಟಮಡು ಮೂಲದ ಆಟೋ ಚಾಲಕ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.