– 32 ಟಿಕೆಟ್, 1 ಲಕ್ಷ ನಗದು ಸೀಜ್
ಬೆಂಗಳೂರು: ಐಸಿಸಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಹೇಗೋ, ಹಾಗೆಯೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಬಿಸಿಸಿಐ ಹಾಗೂ ಐಪಿಎಲ್ ಮಂಡಳಿ ಪಾಲಿಗೆ ಚಿನ್ನದ ಮೊಟ್ಟೆ. ಉಭಯ ತಂಡಗಳ ನಡುವಿನ ರೋಚಕ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ದುಪ್ಪಟ್ಟು ಬೆಲೆಯಾದರೂ ಯೋಚಿಸದೇ ಟಿಕೆಟ್ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಟಿಕೆಟ್ (Black Ticket) ಮಾರಾಟ ಮಾಡ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಚರಣ್ ರಾಜ್, ಹರ್ಷವರ್ಧನ ಸಕ್ಲೇಚ, ವಿನಯ್, ವೆಂಕಟಸಾಯಿ ಬಂಧಿತ ಆರೋಪಿಗಳು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುವ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 32 ಟಿಕೆಟ್‌ಗಳು ಹಾಗೂ 1 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.
ಪ್ರೇಕ್ಷಕರ ಅಗತ್ಯತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಂತು 1,200 ರೂ. ಬೆಲೆಯ ಟಿಕೆಟ್ ಅನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಸಿಸಿಬಿ ವಿಶೇಷ ತಂಡ ಟಿಕೆಟ್ ಖರೀದಿಸುವ ನೆಪದಲ್ಲಿ ಬಂದು ದಂಧೆಕೋರರನ್ನ ಬಂಧಿಸಿದ್ದಾರೆ.
ಇಂದು ರಾತ್ರಿ 7:30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯ ಶುರುವಾಗಲಿದೆ. ಆರ್‌ಸಿಬಿ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯವೂ ಇದಾಗಿದೆ.