– ಭಾರತದ ಪ್ರತ್ಯುತ್ತರಕ್ಕೆ ನಲುಗಿದ ಪಾಕ್
ಭಾರತ ಮತ್ತು ಪಾಕಿಸ್ತಾನ (India vs Pakistan) ಎರಡೂ ದೇಶಗಳು ಬ್ರಿಟಿಷರಿಂದ ಒಟ್ಟಿಗೆ ಸ್ವಾತಂತ್ರ್ಯ ಪಡೆದವು. ಉಭಯ ದೇಶಗಳು ಈಗಾಗಲೇ 75 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡು ಮುಂದೆ ಸಾಗಿವೆ. ಜಗತ್ತಿನಲ್ಲಿ ಇವರಿಬ್ಬರ ಸ್ಥಾನಮಾನ ಗಮನಿಸಿದಾಗ, ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆರ್ಥಿಕತೆ, ಆಂತರಿಕ ಬಿಕ್ಕಟ್ಟು, ಯುದ್ಧದಂತಹ ಸನ್ನಿವೇಶದಲ್ಲೂ ಜಾಗತಿಕ ನಾಯಕರು ಭಾರತದ ಮಧ್ಯಸ್ಥಿಕೆಯನ್ನು ಬಯಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಭಾರತ ತನ್ನ ಸ್ಥಾನವನ್ನು ಉನ್ನತೀಕರಿಸಿಕೊಂಡಿದೆ. ಆದರೆ, ಪಾಕಿಸ್ತಾನ ಇದಕ್ಕೆ ತದ್ವಿರುದ್ಧವಾಗಿದೆ. ಆರ್ಥಿಕ ಸಂಕಷ್ಟ, ಹಣದುಬ್ಬರ, ಸಾಲದ ಹೊರೆ, ಆಹಾರ ಬಿಕ್ಕಟ್ಟು, ಬಡತನ ಹೀಗೆ ಅನೇಕ ಸಮಸ್ಯೆಗಳಿಂದ ದೇಶ ದಿವಾಳಿಯಾಗಿದೆ. ಇದಕ್ಕೆಲ್ಲ ಕಾರಣ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು. ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದಿರುವುದು. ನೆರೆಯ ರಾಷ್ಟ್ರವೊಂದು ಅಭಿವೃದ್ಧಿ ಹೊಂದುತ್ತಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ಉಗ್ರರು, ಗಡಿಯಲ್ಲಿ ಸೈನಿಕರನ್ನು ಪ್ರಚೋದಿಸಿ ಭಾರತವನ್ನು ಆಗಾಗ್ಗೆ ಕೆಣಕುತ್ತಿದೆ. ಯುದ್ಧ ವಿರೋಧಿಯಾದರೂ ತನ್ನ ತಂಟೆಗೆ ಬಂದವರನ್ನು ಭಾರತ ಎಂದಿಗೂ ಬಿಟ್ಟಿಲ್ಲ. ಹಲವು ಪ್ರತಿದಾಳಿಗಳ ಮೂಲಕ ಉಗ್ರರನ್ನು ಓಲೈಸುವ ರಾಷ್ಟ್ರಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಈಗ ಮತ್ತೆ ಅಂತಹದ್ದೇ ಸನ್ನಿವೇಶವೊಂದು ಸೃಷ್ಟಿಯಾಗಿದೆ.
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ 26 ಪ್ರವಾಸಿಗರ ಹತ್ಯಾಕಾಂಡಕ್ಕೆ ಪಾಕಿಸ್ತಾನ ಬಹುದೊಡ್ಡ ಬೆಲೆ ತೆರುವಂತೆ ಮಾಡಲು ಅಜಿತ್ ದೋವಲ್ ಹೊಸ ತಂತ್ರ ರೂಪಿಸಿದ್ದಾರೆ. 2019ರಲ್ಲಿ ಪುಲ್ವಾಮಾ ದಾಳಿಗೆ ಭಾರತ ಸರಿಯಾಗಿಯೇ ಪ್ರತೀಕಾರ ತೀರಿಸಿಕೊಂಡಿತ್ತು. ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರರ ಗೂಡನ್ನೇ ನಾಶ ಮಾಡಿತ್ತು. ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಅತಿದೊಡ್ಡ ಜಿಹಾದಿ ತರಬೇತಿ ಕಾರ್ಖಾನೆಯನ್ನೇ ಬಾಲಕೋಟ್ ವೈಮಾನಿಕ ದಾಳಿ ಮೂಲಕ ಧ್ವಂಸ ಮಾಡಿತು. ಈಗ ಪಹಲ್ಗಾಮ್ ಉಗ್ರ ದಾಳಿ ಮೂಲಕ ಭಾರತವನ್ನು ಮತ್ತೆ ಕೆಣಕಲಾಗಿದೆ. ಆ ಸೇಡು ತೀರಿಸಿಕೊಳ್ಳಲು ಭಾರತ ಮುಂದಾಗಿದೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ
ಕದನ ವಿರಾಮ
ಅಫ್ಘಾನಿಸ್ತಾನ ಮತ್ತು ಇರಾನ್‌ನೊಂದಿಗಿನ ತನ್ನ ಗಡಿಗಳಲ್ಲಿ ಆಂತರಿಕ ಅಸ್ಥಿರತೆ ಮತ್ತು ಉದ್ವಿಗ್ನತೆಯನ್ನು ನಿರ್ವಹಿಸಲು ಪಾಕಿಸ್ತಾನ ಈಗಾಗಲೇ ಹೆಣಗಾಡುತ್ತಿದೆ. ಇಂತಹ ಹೊತ್ತಿನಲ್ಲೇ ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿದೆ. ನಿಮಗೆ ಗೊತ್ತೆ?, 2021 ರಿಂದ ಪಾಕಿಸ್ತಾನ ತನ್ನ ಗಡಿಗಳನ್ನು ಹಂಚಿಕೊಂಡಿರುವ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದೊಂದಿಗಿನ ಗಡಿ ವಿವಾದದಲ್ಲಿ ಅತ್ಯಂತ ಸ್ಥಿರವಾಗಿದೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು (DGMOಗಳು) 2021 ರಲ್ಲಿ 2003 ರ ಕದನ ವಿರಾಮ ಒಪ್ಪಂದವನ್ನು ಪುನರುಚ್ಚರಿಸಿದ್ದರು. ‘ಎರಡೂ ಕಡೆಯವರು ಎಲ್ಲಾ ಒಪ್ಪಂದಗಳು, ತಿಳುವಳಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು 2021 ರ ಫೆಬ್ರವರಿ 24,25ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ನಿಯಂತ್ರಣ ರೇಖೆ ಮತ್ತು ಇತರ ಎಲ್ಲಾ ವಲಯಗಳಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡರು. ಉರಿ ಮತ್ತು ಪುಲ್ವಾಮಾ ದಾಳಿಯ ಹೊರತಾಗಿಯೂ ಕದನ ವಿರಾಮ ನಿಯಮವನ್ನು ಪಾಲಿಸಿಕೊಂಡು ಬರಲಾಗಿತ್ತು.
ಅಂದು ಸೈನಿಕರು, ಇಂದು ಪ್ರವಾಸಿಗರು
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪರಿಸ್ಥಿತಿ ಹದಗೆಟ್ಟಿತು. ಉಗ್ರರ ಗುಂಡೇಟಿಗೆ ನೇಪಾಳಿ ಮೂಲದ ವ್ಯಕ್ತಿಯೂ ಸೇರಿ 26 ಪ್ರವಾಸಿಗರು ಬಲಿಯಾದರು. 2019 ರಲ್ಲಿ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಸಿಆರ್‌ಪಿಎಫ್ ಯೋಧರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ಕಾರ್ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇದು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಪುಲ್ವಾಮಾದಲ್ಲಿ (Pulwama Attack) ಸೈನಿಕರನ್ನು ಟಾರ್ಗೆಟ್ ಮಾಡಲಾಗಿತ್ತು. ಆದರೆ, ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಬೇರ್ಪಡಿಸಿ ಗುಂಡು ಹಾರಿಸಲಾಗಿದೆ. ಎರಡು ದಶಕಗಳಲ್ಲಿ ನಾಗರಿಕರ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿದೆ. ಇದನ್ನೂ ಓದಿ: ಸೋನಾಮಾರ್ಗ್ ಸುರಂಗ ದಾಳಿಯಲ್ಲಿ 7 ಜನರನ್ನು ಬಲಿಪಡೆದಿದ್ದ ಉಗ್ರರ ಟೀಮ್‌ನಿಂದಲೇ ಪಹಲ್ಗಾಮ್ ದಾಳಿ
ಉಗ್ರರ ಶಿಬಿರಗಳು ಉಡೀಸ್
ಭಾರತವು 2016, 2019ರಲ್ಲಿ ಎರಡು ಬಾರಿ ಪಾಕಿಸ್ತಾನದ ವಿರುದ್ಧ ಬಲವಾದ ಪ್ರತೀಕಾರದ ಮಿಲಿಟರಿ ಪ್ರತ್ಯುತ್ತರ ನೀಡಿದೆ. 2016 ರಲ್ಲಿ, ಉರಿಯಲ್ಲಿ ಭಾರತೀಯ ಸೇನಾ ಶಿಬಿರದ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಳಗೆ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿತು. ಮೂರು ವರ್ಷಗಳ ನಂತರ, ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಆಘಾತಕಾರಿ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26 ರ ಮುಂಜಾನೆ ಐಎಎಫ್ ವಿಮಾನಗಳು, ಜೆಇಎಂ ಉಗ್ರರ ತರಬೇತಿ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಿದವು. ಇಸ್ರೇಲ್ ನಿರ್ಮಿತ SPICE 2000 ನಿಖರ ಕ್ಷಿಪಣಿಗಳನ್ನು ಹೊಂದಿದ IAF ಮಿರಾಜ್-2000 ವಿಮಾನಗಳು ಭಾರತ-ಪಾಕ್ ಗಡಿಯುದ್ದಕ್ಕೂ ಹಾರಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರವನ್ನು ನಾಶ ಮಾಡಿದವು. ದಾಳಿ ವೇಳೆ ವಾಯು ರಕ್ಷಣೆ ಮತ್ತು ಡಿಕಾಯ್‌ಗಾಗಿ ನಾಲ್ಕು ಸುಖೋಯ್-30 ವಿಮಾನಗಳು ಇದ್ದವು. ಎರಡು ಕಣ್ಗಾವಲು ವಿಮಾನಗಳಾದ ಫಾಲ್ಕನ್ ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ (AWACS) ಮತ್ತು ಸ್ಥಳೀಯ ನೇತ್ರಾ ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ (AEW&C) ಸಿಸ್ಟಮ್ ಅನ್ನು ನಿಯೋಜಿಸಲಾಗಿತ್ತು. ಪಾಕಿಸ್ತಾನ ವಾಯುಪಡೆಯು ಭಾರತೀಯ ವಾಯುಪ್ರದೇಶಕ್ಕೆ ಎಂಟ್ರಿ ಕೊಟ್ಟಿತು. ಆದರೆ IAF ಯೋಧರು ಅವರನ್ನು ಹೆಮ್ಮೆಟ್ಟಿಸಿದರು. ಇದು ಉಭಯ ದೇಶಗಳ ಸೈನಿಕರ ಕಾದಾಟಕ್ಕೆ ಕಾರಣವಾಯಿತು. ಮಿಗ್ ವಿಮಾನವನ್ನು ಹೊಡೆದುರುಳಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ಸೆರೆ ಹಿಡಿಯಿತು. ವರ್ಧಮಾನ್ ಅವರನ್ನು ಭಾರತ ಬಿಡಿಸಿಕೊಂಡಿದ್ದೇ ರೋಚಕ ಕ್ಷಣವಾಗಿ, ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಿತು.
2019 ರ ಕಾರ್ಯಾಚರಣೆ ವಿಭಿನ್ನವಾಗಿತ್ತು. ಏಕೆಂದರೆ 1971 ರ ಯುದ್ಧದ ನಂತರ ಭಾರತೀಯ ಯುದ್ಧ ವಿಮಾನಗಳು ಮೊದಲ ಬಾರಿಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಭೇದಿಸಿದವು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಸಹ, IAF ದೇಶದ ವಾಯುಪ್ರದೇಶದ ಒಳಗಿನಿಂದ ಕಾರ್ಯನಿರ್ವಹಿಸಿತ್ತು. ಬಾಲಕೋಟ್ ದಾಳಿಯು ಭಾರತದ ಪ್ರತ್ಯುತ್ತರಕ್ಕೆ ಉತ್ತಮ ಉದಾಹರಣೆಯಾಯಿತು. ಶತ್ರು ವಾಯುಪ್ರದೇಶವನ್ನು ಪ್ರವೇಶಿಸುವ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಂಡಿತು. ಭಯೋತ್ಪಾದಕರಾಗಲಿ ಯಾರೇ ಆಗಲಿ, ನುಗ್ಗಿ ಹೊಡೆಯುತ್ತೇವೆ. ಇದ್ಯಾವುದಕ್ಕೂ ಹಿಂಜರಿಯುವುದಿಲ್ಲ ಎಂದು ಭಾರತ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತ್ತು. ಬಾಲಕೋಟ್ ಕಾರ್ಯಾಚರಣೆಯನ್ನು ಭಾರತದ ‘ಅತೀಂದ್ರಿಯ ಪ್ರತಿಕ್ರಿಯೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದರು. ಭವಿಷ್ಯದ ಯಾವುದೇ ದುಸ್ಸಾಹಸಗಳಿಗೆ ಎದುರಾಳಿ 100 ಬಾರಿ ಯೋಚಿಸಬೇಕಾಗುತ್ತದೆ ಎಂದು ಹೇಳಿದರು. ಈ ಪ್ರತಿಕ್ರಿಯೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ ಎಂಬುದನ್ನು ತೋರಿಸುತ್ತದೆ. ಇದನ್ನೂ ಓದಿ: ಆಯ್ಕೆ ಮಾಡಿದ್ದು 4, ಟಾರ್ಗೆಟ್ 1 – ದಾಳಿಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಉಗ್ರರು
ಪಹಲ್ಗಾಮ್ ದಾಳಿ ರೂವಾರಿ ಪಾಕ್‌ಗೆ ಭಾರತ ಪಂಚ್
ಪ್ರವಾಸಿಗರನ್ನು ಗುರಿಯಾಗಿ ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ಗುಂಡಿನ ದಾಳಿಯು ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಗೆ ಕಾರಣವಾಗಿದೆ. ಉಭಯ ದೇಶಗಳು ಪರಸ್ಪರ ಯುದ್ಧ ಘೋಷಿಸಿಕೊಳ್ಳುವ ಹಂತಕ್ಕೆ ಪರಿಸ್ಥಿತಿ ಬಂದು ತಲುಪಿದೆ. ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರನೊಬ್ಬ ಪಾಕ್‌ನ ಸೇನೆಯಲ್ಲಿ ಕೆಲಸ ಮಾಡಿದ್ದಾನೆ. ಸದಾ ಉಗ್ರರನ್ನು ಓಲೈಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಎಂದು ಭಾರತ ಪಣತೊಟ್ಟಿದೆ. ಅದಕ್ಕಾಗಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದೆ.
* ಸಿಂಧೂ ನದಿ ನೀರು ಒಪ್ಪಂದದ ಅಮಾನತು
* ಪಾಕಿಸ್ತಾನದ ಮೂರು ಮಿಲಿಟರಿ ಅಟ್ಯಾಚ್‌ಗಳ ಉಚ್ಚಾಟನೆ. ಎರಡೂ ದೇಶಗಳು ತಮ್ಮ ತಮ್ಮ ಹೈಕಮಿಷನ್‌ಗಳಲ್ಲಿನ ಸಿಬ್ಬಂದಿ ಸಂಖ್ಯೆಯನ್ನು 55 ರಿಂದ 30 ಕ್ಕೆ ಇಳಿಸಲಿವೆ.
* ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ಇದ್ದ ಅನುಮತಿ ಅಮಾನತು. SVES ವೀಸಾದಡಿಯಲ್ಲಿ ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶ ಬಿಡಬೇಕು.
* ಅಟ್ಟಾರಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗಿದೆ. ಅಟ್ಟಾರಿ-ವಾಘಾ ಚೆಕ್ ಪೋಸ್ಟ್ ಎರಡೂ ದೇಶಗಳ ನಡುವಿನ ಏಕೈಕ ಕಾರ್ಯಾಚರಣಾ ಭೂ ಗಡಿ ದಾಟುವಿಕೆಯಾಗಿದೆ.
* ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ 27 ರಿಂದ ಜಾರಿಗೆ ಬರುವಂತೆ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ನೀಡಿರುವ ಎಲ್ಲಾ ಮಾನ್ಯ ವೀಸಾಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗುವ ವೈದ್ಯಕೀಯ ವೀಸಾಗಳು ಏಪ್ರಿಲ್ 29 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾಗಳ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆಯಬೇಕು.
ಸಿಂಧೂ ನದಿ ನೀರು ಒಪ್ಪಂದ
ಪಾಕ್ ವಿರುದ್ಧ ಭಾರತ ಕೈಗೊಂಡ ಕಠಿಣ ಕ್ರಮಗಳಲ್ಲಿ ಸಿಂಧೂ ನದಿ ನೀರು ಅಮಾನತು ಒಪ್ಪಂದ ಕೂಡ ಒಂದು. ಈ ಕ್ರಮ ಈಗಾಗಲೇ ಪಾಕಿಸ್ತಾನವನ್ನು ಆತಂಕಕ್ಕೆ ದೂಡಿದೆ. ‘ಇದು ಯುದ್ಧದ ಕೃತ್ಯ. ಇದು 24 ಕೋಟಿ ಪಾಕಿಸ್ತಾನಿಗಳ ಜೀವನಾಡಿಯನ್ನೇ ನಿರ್ಬಂಧಿಸುತ್ತದೆ. ಸಿಂಧೂ ನದಿ ನೀರು ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಸೇರಿದ ನೀರಿನ ಹರಿವನ್ನು ನಿಲ್ಲಿಸುವ ಅಥವಾ ತಿರುಗಿಸುವ ಯಾವುದೇ ಪ್ರಯತ್ನ ಮಾಡುವಂತಿಲ್ಲ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ನಾವು ಕೂಡ ಸುಮ್ಮನಿರಲ್ಲ ಎಂದಿರುವ ಪಾಕಿಸ್ತಾನ, ಇಸ್ಲಾಮಾಬಾದ್ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ನಿರ್ಬಂಧಿಸಿತು. ವಾಘಾ ಗಡಿ ದಾಟುವಿಕೆಯನ್ನು ಮುಚ್ಚಿತು. ಮೂರನೇ ದೇಶಗಳ ಮೂಲಕ ಹೋಗುವ ಮಾರ್ಗಗಳನ್ನು ಒಳಗೊಂಡಂತೆ ಭಾರತದೊಂದಿಗಿನ ಎಲ್ಲಾ ವ್ಯಾಪಾರ ಮಾರ್ಗಗಳನ್ನು ಸ್ಥಗಿತಗೊಳಿಸಿತು. ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್
ಪಾಕ್‌ಗೆ ಜಲಾಘಾತ
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್‌ಗೆ ಭಾರತ ಜಲಾಘಾತ ಕೊಟ್ಟಿದೆ. ಇದರ ಪರಿಣಾಮ ಪಾಕಿಸ್ತಾನ ನದಿಗಳು ಬತ್ತಿ ಹೋಗಿವೆ. ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದರಿಂದ ಪಾಕಿಸ್ತಾನದಲ್ಲಿ ಹರಿಯುತ್ತಿರುವ ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆ ಕಂಡಿದೆ. ಸಿಯಾಲ್‌ಕೋಟ್ ಬಳಿ ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆಯಾಗಿರುವ ದೃಶ್ಯ ಉಪಗ್ರಹದಲ್ಲಿ ಸೆರೆಯಾಗಿದೆ. ಏ.26 ರಂದು ನದಿಯಲ್ಲಿ ನೀರು ಹರಿಯುತ್ತಿದ್ದರೆ ಏ.29 ರಂದು ನೀರಿನ ಮಟ್ಟ ಭಾರೀ ಇಳಿಕೆಯಾಗಿರುವುದು ಚಿತ್ರದಲ್ಲಿ ಸೆರೆಯಾಗಿದೆ. ನೀರಿನ ಲಭ್ಯತೆ ಕಡಿಮೆಯಾಗಿದ್ದರಿಂದ ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆಯ ಮೇಲೆ ಈಗಾಗಲೇ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಪಾಕ್‌ನಲ್ಲಿ 68% ಜನ ಕೃಷಿ ಭೂಮಿಯನ್ನು ಅವಲಿಂಬಿಸಿದ್ದಾರೆ. ಚೆನಾಬ್ ನದಿಯ ಮೇಲೆ ಈಗಾಗಲೇ ಭಾರತದ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗಿದೆ. ಹೀಗಿದ್ದರೂ ಮಾನವೀಯತೆ ಆಧಾರದ ಮೇಲೆ ಸಿಂಧೂ ನದಿ ಒಪ್ಪಂದವನ್ನು ಭಾರತ ಮುಂದುವರೆಸಿಕೊಂಡು ಹೋಗಿತ್ತು. ಆದರೆ ಪೆಹಲ್ಗಾಮ್ ದುರಂತದ ಬಳಿಕ ಸೆಟೆದು ನಿಂತ ಭಾರತ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದು ಅದರ ಬಿಸಿ ಈಗ ಪಾಕ್ ತಟ್ಟುತ್ತಿದೆ.
700ಕ್ಕೂ ಹೆಚ್ಚು ಪಾಕ್ ಪ್ರಜೆಗಳಿಗೆ ಗೇಟ್‌ಪಾಸ್
ಹಲವು ವರ್ಷಗಳಿಂದ ವೀಸಾ ನೆರವಿನಿಂದ ಭಾರತದಲ್ಲೇ ಠಿಕಾಣಿ ಹೂಡಿದ್ದ ಪಾಕ್ ಪ್ರಜೆಗಳಿಗೆ ಭಾರತ ಗೇಟ್ ಪಾಸ್ ಕೊಟ್ಟಿದೆ. ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ, ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಯೂರಿದ್ದ ಪಾಕಿಸ್ತಾನ ಪ್ರಜೆಗಳು ತಮ್ಮ ದೇಶಗಳಿಗೆ ವಾಪಸ್ ಆಗುತ್ತಿದ್ದಾರೆ. ಇದುವರೆಗೆ 700 ಕ್ಕೂ ಹೆಚ್ಚು ಮಂದಿ ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನ ಸೇರಿದ್ದಾರೆ. ಉಗ್ರರ ದಾಳಿಯಿಂದ ತಮಗೆ ಒದಗಿ ಬಂದ ಈ ಶಿಕ್ಷೆಯನ್ನು ನೆನೆದು ಅನೇಕ ಪಾಕ್ ಪ್ರಜೆಗಳು ಕಣ್ಣೀರಿಟ್ಟಿದ್ದಾರೆ. ಉಗ್ರರ ದಾಳಿಯನ್ನು ಖಂಡಿಸಿ, ಭಾರತ ನಮ್ಮ ಮೇಲೆ ಕರುಣೆ ತೋರಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ.
ತನ್ನ ಪ್ರಭಾವ ಕಳೆದುಕೊಂಡ ಪಾಕ್ ಆರ್ಮಿ
ಪಾಕಿಸ್ತಾನ ಸೇನೆಯು ರಾಜ್ಯದ ಮೇಲಿನ ತನ್ನ ಸಾಂಪ್ರದಾಯಿಕ ಹಿಡಿತವನ್ನು ಕಳೆದುಕೊಳ್ಳುತ್ತಿದೆ. ಸೇನೆ ವಿರುದ್ಧ ಜನರು ಹತಾಷೆಗೊಂಡಿದ್ದಾರೆ. ಏ.17 ರಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಕಾಶ್ಮೀರ ನಮ್ಮದು. ಅದು ಪಾಕ್‌ನ ಕಂಠನಾಳ ಎಂದು ಕರೆದ. ಮುಸ್ಲಿಮರು ಮತ್ತು ಹಿಂದೂಗಳು ಎರಡು ಪ್ರತ್ಯೇಕ ರಾಷ್ಟ್ರಗಳು, ಒಂದೇ ಅಲ್ಲ ಎಂಬ ಮೂಲಭೂತ ನಂಬಿಕೆಯನ್ನು ಎರಡು ರಾಷ್ಟ್ರಗಳ ಸಿದ್ಧಾಂತ ಆಧರಿಸಿದೆ. ಮುಸ್ಲಿಮರು ಜೀವನದ ಎಲ್ಲಾ ಅಂಶಗಳಲ್ಲಿ ಹಿಂದೂಗಳಿಂದ ಭಿನ್ನರಾಗಿದ್ದಾರೆ. ಧರ್ಮ, ಪದ್ಧತಿಗಳು, ಸಂಪ್ರದಾಯಗಳು, ಚಿಂತನೆ ಮತ್ತು ಆಕಾಂಕ್ಷೆಗಳಲ್ಲಿ ಭಿನ್ನತೆ ಇದೆ ಎಂಬ ಮಾತುಗಳನ್ನು ಸೇನಾ ಮುಖ್ಯಸ್ಥ ಆಡಿದ್ದಾನೆ. ತಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ಈ ಹೇಳಿಕೆಗಳು ಬಿಂಬಿಸುತ್ತವೆ. ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ
2019ರ ದಾಳಿ ನಂತರ ಏನೇನಾಯ್ತು?
* ಫೆಬ್ರವರಿ 14: ಜೈಶ್ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ.
* ಫೆಬ್ರವರಿ 15: ಪಾಕಿಸ್ತಾನಕ್ಕೆ ನೀಡಿದ್ದ ಅತ್ಯಂತ ಆಪ್ತ ರಾಷ್ಟ್ರದ ಸ್ಥಾನಮಾನವನ್ನು ಭಾರತ ಹಿಂತೆಗೆದುಕೊಂಡಿತು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದನ್ನು ಪ್ರತ್ಯೇಕಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಪಾಕ್ ತಿರಸ್ಕರಿಸಿತು.
* ಫೆಬ್ರವರಿ 16: 40 ಸಿಆರ್‌ಪಿಎಫ್ ಸೈನಿಕರ ಪಾರ್ಥಿವ ಶರೀರಗಳನ್ನು ಅವರ ತವರುಗಳಲ್ಲಿ ಭಾರೀ ಜನಸ್ತೋಮದ ನಡುವೆ ಅಂತ್ಯಕ್ರಿಯೆ ಮಾಡಲಾಯಿತು.
* ಫೆಬ್ರವರಿ 17: ಕಣಿವೆಯ ಐದು ಪ್ರತ್ಯೇಕತಾವಾದಿ ನಾಯಕರಿಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಂಡಿತು. ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ವಿವಿಧ ದೇಶಗಳಿಗೆ ಮಾಹಿತಿ ನೀಡಿತು.
* ಫೆಬ್ರವರಿ 18: ಪುಲ್ವಾಮಾದ ಪಿಂಗ್ಲೆನಾ ಪ್ರದೇಶದಲ್ಲಿ ಸುಮಾರು 18 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಮೇಜರ್ ಮತ್ತು ಮೂವರು ಜೈಶ್ ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು. ಪಾಕಿಸ್ತಾನವು ಭಾರತಕ್ಕೆ ತನ್ನ ರಾಯಭಾರಿಯನ್ನು ಸಮಾಲೋಚನೆಗಾಗಿ ಕರೆಸಿತು.
* ಫೆಬ್ರವರಿ 19: ನಂತರ ಪ್ರಧಾನಿ ಇಮ್ರಾನ್ ಖಾನ್ ಮೌನ ಮುರಿದರು. ಭಾರತ ಅವರ ವಿರುದ್ಧ ದಂಡನಾತ್ಮಕ ಮಿಲಿಟರಿ ಕ್ರಮ ಕೈಗೊಂಡರೆ ಪಾಕ್ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳಿದರು.
* ಫೆಬ್ರವರಿ 20: ಭಯೋತ್ಪಾದಕ ದಾಳಿ ತನಿಖೆಗಳು ಎನ್‌ಐಎಗೆ ವಹಿಸಲಾಯಿತು. ಎಫ್‌ಐಆರ್‌ನಲ್ಲಿ ಜೈಶ್ ಹೆಸರು ಸೇರಿಸಲಾಗಿದೆ.
* ಫೆಬ್ರವರಿ 22: ಜೈಶ್ ಕೇಂದ್ರ ಕಚೇರಿಯ ಆಡಳಿತಾತ್ಮಕ ನಿಯಂತ್ರಣವನ್ನು ಪಾಕ್ ಸರ್ಕಾರ ವಹಿಸಿಕೊಂಡಿದೆ.
* ಫೆಬ್ರವರಿ 23: ದಂಗೆ ನಿಗ್ರಹ ಕಾರ್ಯಾಚರಣೆಗಳನ್ನು ಬಲಪಡಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕಾಶ್ಮೀರ ಕಣಿವೆಗೆ 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಳುಹಿಸಲಾಗಿದೆ.
* ಫೆಬ್ರವರಿ 26: ಪಾಕ್‌ನ ಬಾಲಕೋಟ್‌ನಲ್ಲಿರುವ ಜೈಶ್‌ನ ಅತಿದೊಡ್ಡ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಐಎಎಫ್ ಬಾಂಬ್ ದಾಳಿ.
* ಫೆಬ್ರವರಿ 27: ಗಡಿಯ ಇನ್ನೊಂದು ಬದಿಯಲ್ಲಿ ಮಿಗ್ ಪತನಗೊಂಡ ನಂತರ ಐಎಎಫ್ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ಸೆರೆಹಿಡಿಯಿತು.
* ಫೆಬ್ರವರಿ 28: ಉಭಯ ದೇಶಗಳ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ಸೇವೆಯನ್ನು ಪಾಕ್ ಸ್ಥಗಿತಗೊಳಿಸಿದೆ. ಜೈಶ್ ನಾಯಕ ಮಸೂದ್ ಅಜರ್‌ಗೆ ಪ್ರಯಾಣ ನಿಷೇಧ ಹೇರುವಂತೆ ಒತ್ತಾಯಿಸಿ ಅಮೆರಿಕ, ಯುಕೆ, ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವಿನಂತಿ.
* ಮಾರ್ಚ್ 1: ಅಂತರರಾಷ್ಟ್ರೀಯ ಮಟ್ಟದ ಒತ್ತಡದ ನಂತರ ಪಾಕ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಬಿಡುಗಡೆ.