ದಾವಣಗೆರೆ: ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ (Siddaramaiah) ಕೈ ಎತ್ತಿಲ್ಲ. ಏಕವಚನದಲ್ಲಿ ಅವರು ಯಾರನ್ನೂ ಕರೆದಿಲ್ಲ, ಪ್ರೀತಿಯಿಂದ ಕರೆದಿದ್ದಾರೆ. ಕೈ ಎತ್ತಿದ್ದಾರೆ, ಏಕವಚನದಲ್ಲಿ ಕರೆದಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಸಚಿವ ಕೆ.ಎನ್ ರಾಜಣ್ಣ (K.N Rajanna) ಹೇಳಿದ್ದಾರೆ.
ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರ ಮಾತಿನ ಸ್ವಭಾವ ಹಾಗೇ ಇದೆ. ಅವರದ್ದು ಬಡವರಿಗೆ ಸ್ಪಂದಿಸುವ ಶ್ರೀಮಂತ ಹೃದಯ. ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ ಚುನಾವಣೆಯಲ್ಲಿ ಸೋತಿದ್ದರಿಂದ ಈ ರೀತಿ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಹೆಚ್ಚುವರಿ ಎಸ್‌ಪಿ ವಿರುದ್ಧ ಸಿಎಂ ಗರಂ – ವೇದಿಕೆಯಲ್ಲೇ ತರಾಟೆ
ಸಿದ್ದರಾಮಯ್ಯನವರ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದವರ ಸ್ಥಿಮಿತತೆ ಸರಿ ಇಲ್ಲ. ಕಾಂಗ್ರೆಸ್ ಶಾಲು ಹಾಕಿಕೊಂಡು ನಮ್ಮ ಕಾರ್ಯಕ್ರಮದಲ್ಲಿ ಕೂತ್ಕೊಂಡು ಧಿಕ್ಕಾರ ಕೂಗಿದರೆ ಅವರನ್ನು ಹೇಡಿಗಳು ಅನ್ನದೇ ಇನ್ನೇನು ಎಂದು ಕರೆಯಬೇಕು ಎಂದು ಅವರು ಕಿಡಿಕಾರಿದ್ದಾರೆ.
ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ. ಕೇಂದ್ರ ಸರ್ಕಾರ ಈಗ ನಿರ್ಧಾರ ಮಾಡಿದ್ದು, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈಗಾಗಲೇ ಜಾತಿ ಗಣತಿ ಮಾಡಿ ಮುಗಿಸಿದ್ದೇವೆ. ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಾಗ ಯಾರೂ ಕೂಡ ವಿರೋಧ ಮಾಡ್ಲಿಲ್ಲ. ವರದಿಗೆ ವಿರುದ್ಧವಾಗಿ ಯಾರೂ ಮಾತಾಡಿಲ್ಲ. ಯಾರಿಗೂ ಅನ್ಯಾಯವಾಗದಂತೆ ನೋಡಬೇಕು ಎಂದು ಹೇಳಿದ್ದರು. ಕೇಂದ್ರದ ನಿರ್ಣಯ ಏನು ಮಾಡಿದೆ ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಪೆಹಲ್ಗಾಮ್ ದಾಳಿಗೆ ಪ್ರತೀಕಾರದ ವಿಚಾರವಾಗಿ, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇ ಬೇಕು ಎನ್ನುವುದು ದೇಶದ ಜನರ ಭಾವನೆ. ನಾನು ಕೂಡ ದೇಶದ ಪ್ರಜೆಗಳಲ್ಲಿ ಒಬ್ಬ ನನ್ನ ಭಾವನೆ ಕೂಡ ಅದೇ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲೇ ಎಎಸ್‌ಪಿ ಮೇಲೆ ಕೈಎತ್ತಿದ ಸಿಎಂ – ಬೆಳಗಾವಿ ʻಕೈʼ ಸಮಾವೇಶದ ವೇಳೆ ಹೈಡ್ರಾಮಾ