ನವದೆಹಲಿ: ಭಾರತಕ್ಕೆ (India) ಸರಕು ಸಾಗಿಸಲು ಅಫ್ಘಾನಿಸ್ತಾನಕ್ಕೆ (Afghanistan) ಪಾಕಿಸ್ತಾನ (Pakistan) ಅನುಮತಿ ನೀಡಿದೆ. ವಾಘಾ – ಅಟ್ಟಾರಿ ಗಡಿಯ (Wagah- Attari Border) ಮೂಲಕ ಸರಕು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನಿಸ್ತಾನ ರಾಯಬಾರಿ ಕಚೇರಿಗೆ ಈ ಬಗ್ಗೆ ಪತ್ರ ಬರೆದಿದೆ. 150 ಅಫ್ಘಾನ್ ಟ್ರಕ್‍ಗಳಿಗೆ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಲು ಅನುಮತಿ ಸಿಕ್ಕಿದೆ.
ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದಾದ ಬಳಿಕ ವಾಘಾ ಗಡಿಯನ್ನು ಎರಡೂ ದೇಶಗಳು ಬಂದ್ ಮಾಡಿದ್ದವು. ಇದರಿಂದ ಭಾರತಕ್ಕೆ ಅಫ್ಘಾನಿಸ್ತಾನದಿಂದ ಬರುತ್ತಿದ್ದ ಸರಕುಗಳು ನಿಂತಿದ್ದವು. ಸರಕು ಸಾಗಾಟ ಮಾಡಲು ಅನುಮತಿ ನೀಡುವಂತೆ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಈ ಮನವಿ ಮೇರೆಗೆ ಪಾಕ್ ಅನುಮತಿ ನೀಡಿದೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಮೂಲದ ಇಬ್ಬರು ಸಾವಿಗೀಡಾಗಿದ್ದರು.
ಈ ದಾಳಿಯ ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಈಗಾಗಲೇ ಪಾಕ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 1960ರ ಸೆಪ್ಟೆಂಬರ್ 19ರಂದು ಸಹಿ ಹಾಕಲಾಗಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿಯಲಾಗಿತ್ತು. ಇದರೊಂದಿಗೆ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಅಟ್ಟಾರಿ-ವಾಘಾ ಗಡಿ ಮುಚ್ಚಲು ಭಾರತ ಆದೇಶಿಸಿತ್ತು.
ಅಷ್ಟೇ ಅಲ್ಲದೇ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ನೀಡಿದ ಅನುಮತಿಯನ್ನು ತಡೆಹಿಡಿಯಲಾಗುತ್ತಿದೆ. ಈ ಹಿಂದೆ ನೀಡಿದ್ದ ಯಾವುದೇ SVES ವೀಸಾಗಳನ್ನು ರದ್ದುಗೊಳಿಸಿ, ಭಾರತ ತೊರೆಯುವಂತೆ ಸೂಚಿಸಲಾಗಿತ್ತು. ಇದಕ್ಕೆ ತಕ್ಕಂತೆ ಪಾಕ್ ಸಹ ಪ್ರತಿ ತಂತ್ರಗಳನ್ನು ರೂಪಿಸಿತ್ತು.