ಇಸ್ಲಮಾಬಾದ್: ಪಹಲ್ಗಾಮ್ ದಾಳಿಯ (Pahalgam Terror Attack) ನಂತರ ಭಾರತ (India) ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಇದರ ನಡುವೆ ಪಾಕಿಸ್ತಾನದ (Pakistan) ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸಿಮ್ ಮಲಿಕ್‌ನನ್ನು ದೇಶದ ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನನ್ನಾಗಿ (ಎನ್ಎಸ್ಎ) ಪಾಕ್ ನೇಮಿಸಿದೆ.
ಸೆಪ್ಟೆಂಬರ್ 2024 ರಿಂದ ಮಲಿಕ್ ಐಎಸ್‌ಐ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಹುದ್ದೆಯ ಹೊರತಾಗಿಯೂ ರಾಷ್ಟ್ರೀಯ ಭದ್ರತಾ ಸಲಹೆಗಾರನನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು: ಪಾಕ್ ರಕ್ಷಣಾ ಸಚಿವ
ಐಎಸ್‌ಐ ಮಹಾನಿರ್ದೇಶಕನಾಗಿ ಸೇವೆ ಸಲ್ಲಿಸುವ ಮೊದಲು, ಮಲಿಕ್ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಅಡ್ಜುಟಂಟ್ ಜನರಲ್ (Adjutant General) ಆಗಿ ಸೇವೆ ಸಲ್ಲಿಸುತ್ತಿದ್ದ. ಕಾನೂನು ಮತ್ತು ಶಿಸ್ತಿನ ವಿಷಯಗಳನ್ನು ಒಳಗೊಂಡಂತೆ ಮಿಲಿಟರಿ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಅಡ್ಜುಟಂಟ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಾಗ ನಡೆದ ಪ್ರಮುಖ ಘಟನೆಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಮತ್ತು ಅವರ ಬೆಂಬಲಿಗರ ಪ್ರತಿಭಟನೆಗಳು ಸೇರಿವೆ. ಈ ಪ್ರತಿಭಟನೆಯನ್ನು ಮಲಿಕ್ ನಿಭಾಯಿಸಿದ್ದ. ಅಲ್ಲದೇ ಬಲೂಚಿಸ್ತಾನ್ ಮತ್ತು ದಕ್ಷಿಣ ವಜೀರಿಸ್ತಾನದಲ್ಲಿ ವಿಭಾಗಗಳನ್ನು ಸಹ ಮಲಿಕ್ ಕಮಾಂಡ್ ಮಾಡಿದ್ದ. ಪಹಲ್ಗಾಮ್ ದಾಳಿಯ ನಂತರ ಭಾರತ – ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮಲಿಕ್‌ನನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರನನ್ನಾಗಿ ನೇಮಕಾತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಪಾಕ್‌ನಿಂದ ಇಂದು (ಮೇ 1) ಸಹ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮುಂದುವರೆದಿದೆ. ಬುಧವಾರ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿರುವುದು ವರದಿಯಾಗಿತ್ತು.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಮೂಲದ ಇಬ್ಬರು ಸಾವಿಗೀಡಾಗಿದ್ದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಮುನೀರ್, ಪಾಕ್ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್ ನಟಿ ಕೆಂಡಾಮಂಡಲ