– ತನ್ನ ಕಣ್ಮುಂದೆಯೇ ಉಗ್ರರ ಗುಂಡಿಗೆ ತಂದೆ ಬಲಿಯಾಗಿದ್ದನ್ನು ಕಂಡು ಆಘಾತಗೊಂಡಿದ್ದ ವಿದ್ಯಾರ್ಥಿನಿ
ಕೋಲ್ಕತ್ತಾ: ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಹುಡುಗಿ ಐಎಸ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ.87 ಅಂಕ ಪಡೆದುಕೊಂಡು ಸಾಧನೆ ಮಾಡಿದ್ದಾರೆ.
17 ವಯಸ್ಸಿನ ಶುಭಂಗಿ ಗುಹಾ ಈ ಸಾಧನೆ ಮಾಡಿದ್ದಾರೆ. ಈಕೆಯ ತಂದೆ ಸಮೀರ್ ಗುಹಾ ಅವರು ಪಹಲ್ಗಾಮ್ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದರು. ತನ್ನ ಕಣ್ಣ ಮುಂದೆಯೇ ತಂದೆಗೆ ಗುಂಡು ಹಾರಿಸಿದ್ದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಳು. ತಂದೆ ಸಾವಿನ ನೋವಿನ ಮಧ್ಯೆಯೂ ಬೋರ್ಡ್ ಪರೀಕ್ಷೆ ಬರೆದಿದ್ದಳು. ಇದನ್ನೂ ಓದಿ: ಭಾರತದ ವಾಯುಸೀಮೆ ಬಂದ್ – ಪಾಕ್‌ಗೆ ಮತ್ತೊಂದು ಶಾಕ್
ತಂದೆಗೆ ಇದ್ದ ಆಸೆಯಂತೆಯೇ ಐಎಸ್‌ಸಿ ಬೋರ್ಡ್ ಪರೀಕ್ಷೆಗೆ ಹಾಜರಾದ ಶುಭಂಗಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ನಿರೀಕ್ಷೆಯಿತ್ತು. ಆದರೆ ಮನೋವಿಜ್ಞಾನ ಮತ್ತು ರಾಜ್ಯಶಾಸ್ತ್ರದ ಅಂಕಗಳು ಆಕೆಯ ಶೇಕಡಾವಾರು ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದ್ದರಿಂದ 87% ಕ್ಕೆ ತೃಪ್ತಿಪಡಬೇಕಾಯಿತು.
ಮಗಳ ಸಾಧನೆ ಬಗ್ಗೆ ತಾಯಿ ಸಬರಿ ಗುಹಾ ಭರವಸೆಯ ಮಾತುಗಳನ್ನಾಡಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ನನಗೆ 1.7 ಕೋಟಿ ರೂ. ಮರಣ ಪರಿಹಾರ ನೀಡಲಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇದು ಆಧಾರರಹಿತ. ನಮಗೆ ಆಧಾರ ಸ್ತಂಭವಾಗಿದ್ದವರನ್ನು ಕಳೆದುಕೊಂಡು ನಮ್ಮ ಕುಟುಂಬ ಆಘಾತದಲ್ಲಿದೆ ಎಂದು ಸಬರಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಮುನೀರ್, ಪಾಕ್ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್ ನಟಿ ಕೆಂಡಾಮಂಡಲ