ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆ, ಮೇ 9 ರಂದು ನಡೆಯಲಿರುವ ರಷ್ಯಾದ (Russia) ವಿಜಯ ದಿವಸ್ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗೈರಾಗಲಿದ್ದಾರೆ ಎಂದು ವರದಿಯಾಗಿದೆ.
ದೇಶದ ಭದ್ರತಾ ಕಾಳಜಿಯಿಂದ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಕ್ಕೆ ತೆರಳುವ ಸಾಧ್ಯತೆ ಇದೆ. ಚೀನಾ ಅಧ್ಯಕ್ಷ್ಯ ಕ್ಸಿ ಜಿನ್‌ಪಿಂಗ್ ಸೇರಿದಂತೆ ಇತರ ವಿಶ್ವ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೋದಿಯವರ ನಿರ್ಧಾರದ ಹಿಂದಿನ ಕಾರಣವನ್ನು ರಷ್ಯಾದ ಅಧಿಕಾರಿಗಳು ಸ್ಪಷ್ಟಪಡಿಸದಿದ್ದರೂ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ನಾಝಿ ವಿರುದ್ಧದ ವಿಜಯದ ಸಲುವಾಗಿ ಈ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ 80ನೇ ವಿಜಯ ದಿವಸವನ್ನು ರಷ್ಯಾ ಆಚರಿಸುತ್ತಿದೆ.
ಈ ತಿಂಗಳ ಆರಂಭದಲ್ಲಿ, ವಿದೇಶಾಂಗ ಸಚಿವಾಲಯ (MEA) ಪ್ರಧಾನಿ ಮೋದಿಯವರಿಗೆ ಮೇ 9 ರಂದು ಮಾಸ್ಕೋದಲ್ಲಿ ನಡೆಯಲಿರುವ ವಿಜಯ ದಿನಾಚರಣೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಆಹ್ವಾನ ಬಂದಿದೆ ಎಂದು ದೃಢಪಡಿಸಿತ್ತು. ಭಾರತ ಪಾಲ್ಗೊಳ್ಳುವ ಬಗ್ಗೆ ಸೂಕ್ತ ಸಮಯದಲ್ಲಿ ಪ್ರಕಟಣೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ TASS, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷದ ವಿಜಯ ದಿನಾಚರಣೆಯಲ್ಲಿ ಭಾರತವನ್ನು ಪ್ರತಿನಿಧಿಸಬಹುದು ಎಂದು ವರದಿ ಮಾಡಿದೆ.