ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ (Pahalgam Terrorist Attack) ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಷ್ಟ್ರ ನಾಯಕರು ನೀಡುತ್ತಿರುವ ಹೇಳಿಕೆಗಳು ಯುದ್ಧದ ಆತಂಕವನ್ನು ಸೃಷ್ಟಿಸಿವೆ. ಈ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ (Khawaja Muhammad Asif) ಭಾರತೀಯ ಸೇನೆ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು ಎಂದು ಹೇಳಿದ್ದಾರೆ.
ಭಾರತೀಯ ಸೇನೆ (Indian Army) ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ಹಾಗಾಗು ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ಏಕೆಂದರೆ ಸೇನಾ ಸಿದ್ಧತೆ ನಮಗೂ ಅನಿವಾರ್ಯವಿದೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಆಸಿಫ್ ತಿಳಿಸಿದ್ದಾರೆ. ಸಚಿವರ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪಸುರಿದಂತಾಗಿದೆ.
ಭಾರತೀಯ ಸೇನೆ ಗಡಿಯಲ್ಲಿ ಸಕ್ರಿಯ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನೆತ್ತರು ಹರಿಸಿದ ಘಟನೆಯು ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಈ ಕೃತ್ಯಕ್ಕೆ ಕಾರಣರಾದವರನ್ನ ಶಿಕ್ಷಿಸಲು ಸರ್ಕಾರ ಮಾಡುವ ಎಲ್ಲ ಪ್ರಯತ್ನಗಳಿಗೆ ಇಡೀ ದೇಶ ಬೆಂಬಲವಾಗಿ ನಿಂತಿದೆ. ದೇಶದ ಜನ, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಬಲವಾದ ಸಂದೇಶ ರವಾನಿಸಿವೆ.
ಇನ್ನೂ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಪಾಕ್ ನಾಯಕರು ಸಹ ನಾಲಿಗೆ ಹರಿಬಿಡಲು ಶುರು ಮಾಡಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲೂ ಯುದ್ಧ ಸಂಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಭಾರತೀಯ ಮೂರು ರಕ್ಷಣಾ ಪಡೆಗಳು ಗಡಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿವೆ. ಈಗಾಗಲೇ ತಾಲೀಮು ನೀಡಿ ಶತ್ರು ರಾಷ್ಟ್ರಕ್ಕೆ ಹುಟ್ಟಡಗಿಸುವ ಎಚ್ಚರಿಕೆಯನ್ನೂ ನೀಡಿವೆ.