ನವದೆಹಲಿ: ಭಾರತ ಸರ್ಕಾರವು (India Government) ಫ್ರಾನ್ಸ್‌ನಿಂದ (France) 26 ರಫೇಲ್ ಎಂ ಯುದ್ಧ ವಿಮಾನಗಳನ್ನು (Rafale – M Fighter Jets) ಖರೀದಿಸುವ 63,000 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಭಾರತದ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ (Dassault Aviation) ಕಂಪನಿಯು ಭಾರತೀಯ ನೌಕಾಪಡೆಗಾಗಿ 26 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲಿದೆ. ಇದರಲ್ಲಿ 22 ಸಿಂಗಲ್ ಸೀಟರ್ ಹಾಗೂ 4 ಡಬಲ್ ಸೀಟರ್ ಯುದ್ಧ ವಿಮಾನಗಳು ಒಳಗೊಂಡಿದೆ. 2031ರ ವೇಳೆಗೆ 26 ಯುದ್ಧ ವಿಮಾನಗಳು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಪೂರೈಕೆ ಆಗುವ ನಿರೀಕ್ಷೆಯಿದೆ. ಈ ವಿಮಾನಗಳಿಂದ ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಾಗಲಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ| ಚೀನಾ ಲಿಂಕ್ ಬಗ್ಗೆ ತನಿಖೆಗೆ ಇಳಿದ ಎನ್‌ಐಎ!
ರಫೇಲ್ ಮೆರೈನ್ ವಿಮಾನಗಳು ವಿಶ್ವದ ಮುಂದುವರಿದ ಫೈಟರ್ ಜೆಟ್‌ಗಳಲ್ಲಿ (Fighter Jet) ಒಂದಾಗಿದೆ. ಪ್ರಸ್ತುತ ಫ್ರಾನ್ಸ್ ನೌಕಾಪಡೆ ಮಾತ್ರ ಈ ಜೆಟ್ ಅನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಭಾರತದ ಸಾಗರ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಖರೀದಿ ಪ್ರಕ್ರಿಯೆಯು ದೀರ್ಘಕಾಲದ ಮಾತುಕತೆಗಳ ನಂತರ ಅಂತಿಮಗೊಂಡಿದ್ದು, ರಕ್ಷಣಾ ಸಚಿವಾಲಯವು ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿಹಾಕಿದೆ. ಇದನ್ನೂ ಓದಿ: ಭಾರತ – ಪಾಕ್ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ
2016 ರಲ್ಲಿ ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ 59,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದಂತೆ 36 ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಭಾರತದ ವಾಯುಸೇನೆಯ ಬತ್ತಳಿಕೆಯನ್ನು ಸೇರಿದೆ.
ಈ ಯುದ್ಧ ವಿಮಾನಗಳನ್ನು ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಅಲ್ಲಿ ನಿಯೋಜಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು