ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸವು (Pahalgam Terrorist Attack) ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಈ ಕೃತ್ಯಕ್ಕೆ ಕಾರಣರಾದವರನ್ನ ಶಿಕ್ಷಿಸಲು ಸರ್ಕಾರ ಮಾಡುವ ಎಲ್ಲ ಪ್ರಯತ್ನಗಳಿಗೆ ಇಡೀ ದೇಶ ಬೆಂಬಲವಾಗಿ ನಿಂತಿದೆ. ದೇಶದ ಜನ, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಬಲವಾದ ಸಂದೇಶ ರವಾನಿಸಿವೆ.
ಭಾರತ ಸರ್ಕಾರ ಪಾಕಿಸ್ತಾನದ (Pakistan) ವಿರುದ್ಧ ಹೆಜ್ಜೆ ಹೆಜ್ಜೆಗೂ ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಇಡೀ ಪಾಕಿಸ್ತಾನದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಉಭಯ ದೇಶಗಳ ನಡುವೆ ಯಾವುದೇ ಸಂದರ್ಭದಲ್ಲೂ ಯುದ್ಧ ಘೋಷಣೆಯಾಗುವ ಸಾಧ್ಯತೆಗಳು ಮುನ್ನೆಲೆಗೆ ಬಂದಿವೆ. ಹೀಗಾಗಿ ಮೂರು ಸೇನಾ ಪಡೆಗಳಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ, ವಾಯುಸೇನೆ ನೌಕಾಸೇನೆಗಳು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ತಾಲೀಮು ಪ್ರಾರಂಭಿಸಿ ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿವೆ. ಮತ್ತೊಂದೆಡೆ ಗಡಿಯಲ್ಲಿ ಜನ ಬಂಕರ್‌ಗಳನ್ನು ಸ್ವಯಂಪ್ರೇರಿತವಾಗಿ ಶುಚಿಗೊಳಿಸುತ್ತಿದ್ದಾರೆ. ಇಷ್ಟೆಲ್ಲ ಉದ್ವಿಗ್ನತೆಗೆ ಕಾರಣವಾದ ʻಟಿಆರ್‌ಎಫ್ʼ (ದಿ ರೆಸಿಸ್ಟೆಂಟ್ ಫ್ರಂಟ್ – TRF) ಫಾಲ್ಕನ್ ಸ್ಕ್ವಾಡ್ ಹೇಗೆ ಕೆಲಸ ಮಾಡುತ್ತೆ? ಯುವಕರಿಗೆ ಹೇಗೆ ಬ್ರೈನ್ ವಾಶ್ ಮಾಡಿ ಸಂಘಟನೆಗೆ ಸೇರಿಸಿಕೊಳ್ಳುತ್ತೆ? ಇದರ ಮಾಸ್ಟರ್ ಮೈಂಡ್ ಯಾರು? ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವೆಲ್ಲ ಸಂಘಟನೆಗಳು ಈಗಲೂ ಸಕ್ರೀಯವಾಗಿವೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಜಮ್ಮುವಿನಿಂದ ಪಥ ಬದಲಿಸಿದ ಉಗ್ರರು
2014 ರಿಂದ 2018ರ ಅವಧಿ ಜಮ್ಮು ಮತ್ತು ಕಾಶ್ಮೀರ ಸ್ಥಳಗಳು ಉಗ್ರರ ಸ್ವರ್ಗವಾಗಿತ್ತು. 2014ರಿಂದ 2018ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,708 ಉಗ್ರರ ದಾಳಿಗಳು ನಡೆದಿದ್ದವು, 2018ರಿಂದ 2022ರ ವರೆಗೆ 761 ಉಗ್ರರ ದಾಳಿಗಳು ನಡೆದು 174 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಸೇನೆ (Indian Army) 626 ಉಗ್ರರನ್ನು ಬಲಿ ಪಡೆದಿತ್ತು. 2023ರಲ್ಲಿ ಜಮ್ಮು ಪ್ರದೇಶದಲ್ಲಿ ಮಾತ್ರವೇ ಸುಮಾರು 40 ಭಯೋತ್ಪಾದಕ ದಾಳಿಗಳು ನಡೆದಿರುವುದಾಗಿ ಸೇನೆ ಹೇಳಿದೆ. ಆದ್ರೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಭಯೋತ್ಪಾದಕರು ತಮ್ಮ ಕಾರ್ಯತಂತ್ರ ಬದಲಿಸಿದ್ದರು. ಆಗ ಕಾಶ್ಮೀರವನ್ನು ಬಿಟ್ಟು ಜಮ್ಮುವಿನಲ್ಲಿ ದಾಳಿಗಳನ್ನು ನಡೆಸತೊಡಗಿದರು. 2021ರಿಂದ ಜುಲೈ 2024ರ ವರೆಗೆ ಜಮ್ಮುವಿನ ವಿವಿಧ ಭಾಗಗಳಲ್ಲಿ 33 ಉಗ್ರ ದಾಳಿಗಳು ನಡೆದಿದ್ದವು. 2024ರ ಮಧ್ಯಭಾಗದವರೆಗೆ ಜಮ್ಮುವಿನಲ್ಲಿ 8 ದಾಳಿಗಳು ನಡೆದು, 11 ಮಂದಿ ಸಾವಿಗೀಡಾಗಿದ್ದರು; ವರ್ಷದ ಮೊದಲ ಆರು ತಿಂಗಳಲ್ಲಿ ನಡೆದ ದಾಳಿಗಳಿಂದ 12 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಕೆಲವು ಸೈನಿಕರನ್ನು ಚೀನಾದ ಗಡಿಗೆ ಕಳಿಸಿದ್ದು ಕೂಡ ಇಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿತ್ತು.
ಭದ್ರತಾ ಪಡೆಗಳನ್ನು ತಪ್ಪು ದಾರಿಗೆಳೆಯುವುದು, ಗುಪ್ತಚರ ಅಧಿಕಾರಿಗಳ ದಿಕ್ಕುತಪ್ಪಿಸುವುದು ಸೇರಿದಂತೆ ಉಗ್ರರ ಹಲವು ತಂತ್ರಗಾರಿಕೆ ಇದರ ಹಿಂದಿತ್ತು. ಕಾಶ್ಮೀರಕ್ಕೆ ಹೋಲಿಸಿದರೆ, ಜಮ್ಮುವಿನಲ್ಲಿ ಕಡಿಮೆ ಸೇನಾ ನಿಯೋಜನೆ ಇದ್ದದ್ದು ಕೂಡ ಅಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿತ್ತು. ಹಾಗಾಗಿ ಜಮ್ಮುವಿನ ಕಥುವಾ ಸೇರಿದಂತೆ ಅನೇಕ ಪ್ರದೇಶಗಳನ್ನೇ ಉಗ್ರರು ಟಾರ್ಗೆಟ್ ಮಾಡಿದ್ದರು. ಆದರೆ, 2019ರ ಬಳಿಕ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ದಾಳಿಯು, ಉಗ್ರರು ಮತ್ತೆ ಕಾಶ್ಮೀರದತ್ತ ದೃಷ್ಟಿ ನೆಟ್ಟಿರಬಹುದೇ ಎನ್ನುವ ಅನುಮಾನ ಮೂಡಿಸಿದೆ.
ಇದೇ ಏ.17ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡುತ್ತಾ, ಹಿಂದೂ ಹಾಗೂ ಮುಸ್ಲಿಂ ಧರ್ಮಗಳು ಹೇಗೆ ಭಿನ್ನ ಎಂದು ವಿವರಿಸಿದ್ದರು. ಕಾಶ್ಮೀರ ಎಂದೆಂದಿಗೂ ಪಾಕಿಸ್ತಾನದ ʻಕಂಠನಾಳ’ ಎಂದಿದ್ದರು. ಆದರೀಗ ಅವರ ಈ ಮಾತುಗಳಿಗೂ ಪಹಲ್ಲಾಮ್ ದಾಳಿಗೂ ನಂಟು ಇದೆ ಎನ್ನಲಾಗುತ್ತಿದೆ. ಪಾಕಿಸ್ತಾನವು ಆಂತರಿಕ ಸಂಘರ್ಷ ಮತ್ತು ಆರ್ಥಿಕ ಕುಸಿತದಂತಹ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ಜನರ ವಿಶ್ವಾಸ ಗಳಿಸುವ ಸಲುವಾಗಿ ಸೇನೆ ಮತ್ತು ರಾಜಕಾರಣಿಗಳು ಕಾಶ್ಮೀರ ವಿವಾದವನ್ನು ಜೀವಂತವಾಗಿಡಲು ಬಯಸುತ್ತಿದ್ದು, ಅದರ ಭಾಗವಾಗಿಯೇ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ತಜ್ಞರ ವಿಶ್ಲೇಷಣೆ.
ಯಾವ್ಯಾವ ಉಗ್ರ ಸಂಘಟನೆಗಳು ಸಕ್ರೀಯ?
ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರೀಯವಾಗಿವೆ. ಅದರಲ್ಲಿ ಟಿಆರ್‌ಎಫ್ ಪ್ರಮುಖವಾಗಿದೆ, ಇದನ್ನ ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದಿವೆ.
ಟಿಆರ್‌ಎಫ್ ಕೆಲಸ ಹೇಗೆ?
ಕಾಶ್ಮೀರದಲ್ಲಿ ಸಕ್ರೀಯವಾಗಿರುವ ʻದಿ ರೆಸಿಸ್ಟಂಟ್ ಫ್ರಂಟ್ʼ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ತಿಂಗಳಾನುಗಟ್ಟಲೆ ಕಠಿಣ ತರಬೇತಿ ನೀಡುವುದು, ಬಳಿಕ ಕಣಿವೆ ಪ್ರದೇಶಗಳಲ್ಲಿ ದಾಳಿ ನಡೆಸುವುದು ಇದರ ಕಾರ್ಯತಂತ್ರ. ಒಂದು ವೇಳೆ ದಾಳಿಕೋರರು ಭಾರತೀಯ ಸೇನೆಗೆ ಸಿಕ್ಕಿಬಿದ್ದರೆ ಆತ್ಮಾಹುತಿ ಬಾಂಬ್ ಸ್ಫೋಟಿಕೊಳ್ಳುವುದಕ್ಕೂ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಕಟ್ಟುಮಸ್ತಾದ ಯುವಕರ ತಲೆಗೆ ಮತಾಂಧತೆ ಚಿಂತನೆಗಳನ್ನ ತುಂಬುತ್ತಾರೆ. ಬ್ರೈನ್ ವಾಶ್ ಮಾಡಿ ತಮ್ಮ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತದೆ. ನಿರುದ್ಯೋಗಿಗಳು, ತೀರಾ ಬಡತನ ಕುಟುಂಬದ ಯುವಕರಿಗೆ ಹಣದ ಆಮಿಷ ತೋರಿಸಿ, ನೀನೊಂದು ನಿರ್ದಿಷ್ಟ ಗುರಿ ಸಾಧಿಸಲು ಈ ಭೂಮಿಮೇಲೆ ಹುಟ್ಟಿದ್ದೀಯಾ ಎಂದು ಬ್ರೈನ್ ವಾಶ್ ಮಾಡುವುದು, ಬಳಿಕ ಅವರಿಗೆ ತರಬೇತಿ ನೀಡಿ ಭಾರತದ ವಿರುದ್ಧವೇ ದಾಳಿಗೆ ನಿಯೋಜಿಸುವುದು ಟಿಆರ್‌ಎಫ್‌ನ ಕೆಲಸ. ಆದ್ರೆ ಇತ್ತೀಚಿನ ದಿನಗಳಲ್ಲಿ ಟಿಆರ್‌ಎಫ್ ಆಧುನಿಕ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು, ಭದ್ರತಾ ಪಡೆಗಳು ಹಾಗೂ ಸಾಮಾನ್ಯ ಜನರ ಮೇಲಿನ ದಾಳಿಗಾಗಿ ಬಸಳಸುತ್ತಿದೆ. ಇತ್ತೀಚಿನ ಪಹಲ್ಗಾಮ್ ದಾಳಿಗೂ ಸಹ ಎಕೆ-47 ಮತ್ತು M4 ರೈಫಲ್‌ಗಳನ್ನ ಬಳಸಲಾಗಿತ್ತು ಅನ್ನೋದು ಗಮನಾರ್ಹ.
ಹಣಕಾಸಿನ ನೆರವು ಹೇಗೆ?
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಸಂಘಟನೆಗಳು ಜೈಶ್ ಎ ಮೊಹಮ್ಮದ್‌ನಿಂದ ಹಣಕಾಸಿನ ನೆರವನ್ನು ಪಡೆಯುತ್ತಿವೆ. ಜೊತೆಗೆ ಭಾರತದ ಮೇಲೆ ಯಾವ ಯಾವ ರೀತಿ ದಾಳಿಗಳನ್ನ ನಡೆಸಬೇಕು ಅನ್ನೋ ರೂಪುರೇಷೆಯೂ ಈ ಸಂಘಟನೆ ಸಿದ್ಧಮಾಡಿಕೊಡುತ್ತದೆ. ಹಿಂದೆಲ್ಲಾ ಗಡಿ ನಿಯಂತ್ರಣ ರೇಖೆ ದಾಟಿ ಬರುತ್ತಿದ್ದ ಉಗ್ರರು, ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸುತ್ತಿದ್ದರು, ದಾಳಿ ಮಾಡಿ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗುತ್ತಿದ್ದರು. ಆದ್ರೆ ಉಗ್ರರು ಹೈಬ್ರಿಡ್ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಚೀನಾ ನಿರ್ಮಿತ ಆಪ್‌ಗಳನ್ನ ಬಳಸಿಕೊಂಡು ದಾಳಿಯ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಆಪ್‌ಗಳ ಟ್ರ್ಯಾಕಿಂಗ್ ಮಾಡೋದು ಕಷ್ಟವಾಗಿರುವುದರಿಂದ ಭಾರತೀಯ ಸೇನೆಗೂ ಇದು ಸವಾಲಾಗಿದೆ.
ಭಾರತೀಯ ಸೇನೆಗೆ ಸವಾಲಾಗಿರುವುದು ಏಕೆ?
ಇತ್ತೀಚೆಗೆ ಜಮ್ಮುವಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಸೈನಿಕರು ಉಗ್ರರನ್ನು ಮಟ್ಟಹಾಕಲು ಹರಸಾಹಸ ಪಡುತ್ತಿದ್ದಾರೆ, ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಈ ಸಂಘಟನೆಗಳು ಅತ್ಯುನ್ನತ ತರಬೇತಿ ಪಡೆದ ಭಯೋತ್ಪಾದಕರನ್ನ ಉಗ್ರ ಕೃತ್ಯಗಳಿಗೆ ನಿಯೋಜಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ತರಬೇತಿ ಪಡೆದ ಉಗ್ರರನ್ನು ಇಲ್ಲಿಗೆ ಕಳಿಸಲಾಗುತ್ತಿದೆ. ಅಲ್ಲದೇ ಅಮೆರಿಕ ನಿರ್ಮಿತ ಎಂ4 ಅತ್ಯಾಧುನಿಕ ರೈಫಲ್ ಅನ್ನು ಕೃತ್ಯಕ್ಕೆ ಬಳಸುತ್ತಿದ್ದಾರೆ.
ಕೃತ್ಯದ ಮಾಸ್ಟರ್ ಮೈಂಡ್ ಯಾರು?
ಈ ದಾಳಿಯನ್ನು ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ. ಲಷ್ಕರ್ ಸಂಘಟನೆಯ ಟಾಪ್ ಕಮಾಂಡರ್ ಆಗಿರುವ ಸೈಫುಲ್ಲಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದಾನೆಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ (Mumbai Attack) ಸೂತ್ರಧಾರ ಹಫೀಜ್ ಸಯೀದ್ ಆಪ್ತ ವ್ಯಕ್ತಿಯಾಗಿದ್ದಾನೆ. ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್ ಉಗ್ರರು ಭದ್ರತೆ ನೀಡುತ್ತಾರೆ.
ಯಾವಾಗಲೂ ಭಾರತದ ವಿರುದ್ಧವೇ ಕೆಲಸ ಮಾಡುವುದರಿಂದ ಸೇನಾ ಅಧಿಕಾರಿಗಳ (Pakistan Army) ಜೊತೆಗೂ ಈತ ಉತ್ತಮ ಸಂಬಂಧ ಹೊಂದಿದ್ದಾನೆ. ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದ. ಕಂಗನ್‌ಪುರದಲ್ಲಿ ಪಾಕ್ ಸೇನೆಯ ದೊಡ್ಡ ಬೆಟಾಲಿಯನ್ ನೆಲೆಗೊಂಡಿದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ.ಭಾಷಣದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಭಾರತದ ವಿರುದ್ಧ ವಿಷಕಾರಿದ್ದ. ಇಂದು ಫೆಬ್ರವರಿ 2, 2025. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ನೀಡಿದ್ದ ಅನ್ನೋದು ಗಮನಾರ್ಹ.