ನವದೆಹಲಿ: ಕೃನಾಲ್ ಪಾಂಡ್ಯ (Krunal Pandya), ವಿರಾಟ್ ಕೊಹ್ಲಿ (Virat Kohli) ಶತಕದ ಜೊತೆಯಾಟ ಹಾಗೂ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.
ಸೂಪರ್ ಸಂಡೇ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಾಗ ಕೆ.ಎಲ್ ರಾಹುಲ್ ಸಂಭ್ರಮಿಸಿದ ರೀತಿ ಇದಕ್ಕೆ ಕಾರಣವಾಗಿತ್ತು. ಅಂದಿನಿಂದಲೇ ಕೊಹ್ಲಿ ಸೇಡು ತೀರಿಸಿಕೊಳ್ಳಲಿದ್ದಾರೆ ಅನ್ನೋ ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿತ್ತು. ಇದೀಗ ಆರ್‌ಸಿಬಿ ಗೆಲುವು ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಗೆಲುವಾಗಿದೆ. ಅಲ್ಲದೇ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ.
ಗೆಲುವಿಗೆ 163 ರನ್‌ಗಳ ಗುರಿ ಪಡೆದ ಆರ್‌ಸಿಬಿ ಪವರ್ ಪ್ಲೇ ನಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮೊದಲ 4 ಓವರ್‌ಗಳಲ್ಲಿ 26 ರನ್‌ಗಳಿಗೆ ಜಾಕೋಬ್ ಬೇಥಲ್ (12 ರನ್), ರಜತ್ ಪಾಟೀದಾರ್ (6 ರನ್), ದೇವದತ್ ಪಡಿಕಲ್ (0) ವಿಕೆಟ್ ಕಳೆದುಕೊಂಡು ಆರ್‌ಸಿಬಿ ಸಂಕಷ್ಟಕ್ಕೀಡಾಯಿತು. 10 ಓವರ್ ಕಳೆದರೂ 100 ರನ್‌ಗಳ ಗಡಿ ದಾಟದ ಆರ್‌ಸಿಬಿ ಪಂದ್ಯ ಗೆಲ್ಲುವುದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಆದ್ರೆ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಅವರ ಶತಕದ ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮವಾಗಿಸಿತು.
4ನೇ ವಿಕೆಟಿಗೆ ಕೃನಾಲ್ ಪಾಂಡ್ಯ, ವಿರಾಟ್ ಕೊಹ್ಲಿ ಜೋಡಿ 84 ಎಸೆತಗಳಲ್ಲಿ 119 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಗೆಲುವಿಗೆ ಕಾರಣವಾಯಿತು. ಇನ್ನೂ ಕೊನೆಯಲ್ಲಿ ಟಿಮ್ ಡೇವಿಡ್ ಅವರ ಸಿಕ್ಸರ್ ಬೌಂಡರಿ ಆಟದಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು. ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಅಜೇಯ 73 ರನ್ (47 ಎಸೆತ, 5 ಬೌಂಡರಿ, 4 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (47 ಎಸೆತ, 4 ಬೌಂಡರಿ) ಗಳಿಸಿದ್ರೆ, ಟಿಮ್ ಡೇವಿಡ್ 5 ಎಸೆತಗಳಲ್ಲಿ 19 ರನ್ ಗಳಿಸಿ ಮಿಂಚಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಪೊರೇಲ್ 28 ಮತ್ತು ಫಫ್ ಡುಪ್ಲೆಸಿ 22 ರನ್ ಸಿಡಿಸಿದರು. ಕರುಣ್ ನಾಯರ್ 4 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಉತ್ತಮವಾಗಿ ಆಡಿದ ಕೆ.ಎಲ್. ರಾಹುಲ್ 41 (39 ಎಸೆತ) ರನ್‌ಗಳ ಕೊಡುಗೆ ನೀಡಿದರು. ಒಂದು ಹಂತದಲ್ಲಿ 200ರ ಸಮೀಪಕ್ಕೆ ತಲುಪಬಹುದು ಎನ್ನುವಂತಿದ್ದ ರನ್ ಗತಿ ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತಕ್ಕೆ ರನ್ ಕದಿಯಲು ತಿಣುಕಾಡುತ್ತಾ ಸಾಗಿತು. ಅತ್ತ ರನ್ ಬರದ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಆದ್ರೆ ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್ ಸ್ಟಬ್ಸ್ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಡೆಲ್ಲಿ 163 ರನ್‌ಗಳ ಗುರಿ ನೀಡಲು ನೆರವಾದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 33 ರನ್ ನೀಡಿ 3 ವಿಕೆಟ್ ಕಿತ್ತರೆ, ಹೇಜಲ್ವುಡ್ 36 ರನ್ ನೀಡಿ 2 ವಿಕೆಟ್ ಪಡೆದರು.
ರಾಹುಲ್ vs ಕೊಹ್ಲಿ:
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಗ ಗೆಲುವಿನ ರುವಾರಿಯಾಗಿದ್ದ ಕೆ.ಎಲ್ ರಾಹುಲ್ ಅವರು, ʻಇದು ನನ್ನ ಗ್ರೌಂಡ್ʼ ಎಂದು ʻಕಾಂತಾರʼ ಚಲನಚಿತ್ರದ ದೃಶ್ಯದ ಮಾದರಿಯನ್ನು ಅನುಕರಿಸಿದ್ದರು. ಇದೀಗ ಗೆದ್ದು ಆರ್‌ಸಿಬಿ ಸೋಲಿಗೆ ಸೇಡು ತೀರಿಸಿಕೊಂಡಿದೆ.