ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ? ಅದಕ್ಕೆ ಕಾಯ್ತಿದ್ಯಾ? ಇನ್ನೂ ಸ್ವಲ್ಪ ಹೋರಾಟ ಮಾಡ್ಬೇಕಿತ್ತು… ತುಂಬಾ ನೋವು ಕೊಟ್ಬಿಟ್ಟೆ..! ನಿನ್ನನ್ನ ನಂಬಿಸಿ ಮೋಸ ಮಾಡ್ಬಿಟ್ಟೆ ಕಣೋ.. ಅದೇ ನೋವು ಕಾಡ್ತಿದೆ ಗೋಪಾಲ.. ಆದ್ರೂ ಹೇಗಾದ್ರೂ ಮಾಡಿ ನನ್ನ ನೀನು ನಿನ್ನ ಜೊತೆನೇ ಉಳಿಸ್ಕೊಳ್ಬೇಕಿತ್ತು..!
ನಿನಗೆ ಈಗ ಖುಷಿ ಆಗ್ತಾ ಇರಬಹುದು ಅಲ್ವಾ? ನಾನಿಲ್ಲಿ ದುಃಖ ಪಡ್ತಿರೋದ್ಕೆ..? ಅವಾಗ ಬೇಡ ಹೋಗು ಅಂತ ಹೇಳಿ, ಈಗ ನಿನ್ನ ನೆನಪು ಮಾಡ್ಕೊಂಡು ಅಳ್ತಿನಿ ಅಂತ.. ನನಗೆ ಆಗ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ ಕಣೋ… ನಾನು ನಿನ್ನ ಪ್ರೀತಿಸ್ತಿದಿನಿ ಅಂತ ಹೇಳ್ಕೊಂಡ್ರೆ ಎಲ್ಲಿ ನಮ್ಮ ಮನೆಲಿ, ನಮ್ಮ ಏರಿಯಾದಲ್ಲಿ ಯಾರು ಏನು ಅಂದ್ಕೊಂಡು ಬಿಡ್ತಾರೋ ಅಂತ ಭಯ… ನನ್ನ ಬದುಕಲ್ಲಿ ನಿನ್ನ ಉಳಿಸಿಕೊಳ್ಳೋಕೆ ಸ್ವಲ್ಪಾನೂ ಪ್ರಯತ್ನ ಮಾಡ್ಲೇ ಇಲ್ಲ.. ನನಗೆ ಗೊತ್ತು ನೀನು ಕ್ಷಮಿಸಲ್ಲ… ಆದ್ರೂ ಯಾಕೆ ನೀನು ನನ್ನ ಬಿಟ್ಟು ಹೋದವನು ನೋಡೋಕೆ ಬರಲೇ ಇಲ್ಲ ಮತ್ತೆ? ಆ ಕಡೆಯಿಂದ ಇಷ್ಟೆಲ್ಲ ಮಾತಾಡಿದ್ದ ರೂಪ ಒಂದೇ ಸಮನೆ ಅಳ್ತಿದ್ಲು..! ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!
ನನಗೆ ಯಾವ ರೀತಿ ಸಮಾಧಾನ ಮಾಡ್ಬೇಕು ಅನ್ನೋದೇ ಗೊತ್ತಾಗದೇ.. ರೂಪ.. ನೀನೇನೂ ತಪ್ಪು ಮಾಡಿಲ್ಲ.. ಒಳ್ಳೆಯ ಆಯ್ಕೆಗಳನ್ನ ಮಾಡೋದ್ರಲ್ಲಿ ನೀನು ತುಂಬಾ ಜಾಣೆ..! ಒಳ್ಳೆಯ ಬದುಕನ್ನೇ ಆಯ್ಕೆ ಮಾಡ್ಕೊಂಡಿದಿಯಾ, ಅದರಲ್ಲಿ ಯಾವ ಅನುಮಾನವೂ ಬೇಡ.. ಈಗ ಆಗೋದೆಲ್ಲ ಆಗಿದೆ, ಇನ್ನು ಈ ನೆನಪುಗಳಿಗೆಲ್ಲ ಅರ್ಥ ಇಲ್ಲ.. ಯಾಕೆ ನೊಂದ್ಕೋತಿಯಾ ನನ್ನ ನೆನಪು ಮಾಡ್ಕೊಂಡು ಅಂತ ಹೇಳ್ದೆ… ಆಗ ಸಿಕ್ಕಿದ್ದು ನನಗೆ ನನ್ನ ಹಳೆಯ ರೂಪ.. ಅದೇ ಕೋಪ.. ಅದೇ ಜಗಳ.. ಓಹೋ ನಿನಗೆ ಈಗ ನನ್ನ ನೆನಪು ಕಹಿನಾ? ನನ್ನ ನೆನಪು ಮಾಡ್ಕೊಂಡ್ರೆ ನೋವಾಗುತ್ತಾ..? ಇಲ್ಲ ನಿನ್ನ ನೆನಪಲ್ಲಿ ತುಂಬಾ ನೆಮ್ಮದಿಯಾಗಿ ಇದಿನಿ ಕಣೇ ಅಂದೆ.. ! ನಾನು ಅಷ್ಟೇ ಗೋಪಾಲ… ನಿನ್ನ ನೆನಪಲ್ಲಿ ತುಂಬಾ ಖುಷಿಯಲ್ಲಿ ಇದಿನಿ.. ಆದ್ರೂ ಕೆಲವು ಸಲ ಕಣ್ಣಲ್ಲಿ ನೀರು ಬರುತ್ತೆ.. ತುಂಬಾ ಮಿಸ್ ಮಾಡ್ಕೊಳ್ತಾ ಇದಿನಿ.. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ನಾನು ಮತ್ತೆ ನಿನ್ನ ಹತ್ರ ಮಾತಾಡ್ತಿನೋ ಇಲ್ವೋ ಅಂದ್ಕೊಂಡಿದ್ದೆ.. ನಿನಗೆ ಮೋಸ ಮಾಡಿ ಇಷ್ಟು ವರ್ಷದ ಮೇಲೆ ನಿನಗೆ ಫೋನ್ ಮಾಡಿದಿನಿ, ನೀನು ಎಂಥ ಮನುಷ್ಯನೋ? ನನಗೆ ಬಯ್ಯೋದಿಲ್ವಾ.. ನನಗೆ ಜೋರು ಮಾಡು ಗೋಪಾಲ.. ಬಂದು ಕೆನ್ನೆಗೆ ನಾಲ್ಕು ಬಾರಿಸಿದ್ರು ಸರಿ… ನಿನಗೆ ಮೋಸ ಮಾಡಿದ್ಕೆ ಒಂದು ಚೆಂದದ ಶಿಕ್ಷೆನೂ ಇಲ್ವಾ..? ಏನು ಶಿಕ್ಷೆ ಕೊಡೋದೆ..? ನೀನೆನು ಅಪರಾಧಿನಾ.. ಅಲ್ವಲ್ಲಾ.. ನೀನು ಈ ಹೃದಯದ ಅರಸಿ… ನೀನು ಎಲ್ಲೋ ಚೆನ್ನಾಗಿದಿಯಾ ಅನ್ನೋ ನಂಬಿಕೆನೆ ನನ್ನ ಸಂಭ್ರಮ ಅಲ್ವಾ.. ಏನೇ ಇರಲಿ.. ನೀನು ನನ್ನವಳೆ…. ನೀನು ಅಷ್ಟೇ ಗೋಪಾಲ.. ಅಂತ ಕಾಲ್ ಕಟ್ ಮಾಡಿದ್ಲು.. !
ಹಾಗೇ ಹಳೆಯ ದಿನಗಳೆಲ್ಲ ಸುಮ್ಮನೆ ನನ್ನ ಕಣ್ಮುಂದೆ ಬಂತು… ಅಷ್ಟೆಲ್ಲ ಅನ್ಯೋನ್ಯವಾಗಿದ್ದ ಪ್ರೀತಿಯಲ್ಲಿ ಅದೆಂತಹ ಬಿರುಗಾಳಿ ಬಂತು ಅಂದ್ರೆ… ಯಾವುದು ಕಾರಣವೇ ಇಲ್ಲದೇ, ನೀನು ನನ್ನ ಬದುಕಿಗೆ ಬೇಡ ಅಂದಿದ್ದ ಅವಳ ಆ ದಿನದ ಧ್ವನಿ.. ಅವಳನ್ನ ನನ್ನ ಬದುಕಲ್ಲಿ ಉಳಿಸಿಕೊಳ್ಳಲು ನಾನು ಚಡಪಡಿಸಿದ ರೀತಿ….. ಹುಚ್ಚನಂತೆ ಅವಳನ್ನು ಪರಿಪರಿಯಾಗಿ ಬೇಡಿಕೊಂಡಿದ್ದು, ಕೊನೆಯ ಪ್ರಯತ್ನವನ್ನೂ ಮಾಡಿ, ನನ್ನಕ್ಕ ಆಶಾಳ ಜೊತೆ ಹೇಳಿಸಿದ್ದು… ಕೊನೆಗೂ ಉಳಿಸಿಕೊಳ್ಳಲು ಆಗದೇ ಹೋಗಿದ್ದು.. ಅದೆಲ್ಲ ನೆನಪಾಗಿ.. ನನ್ನನ್ನೇ ನಾನು ಪಾತ್ರವಾಗಿ ನೋಡಿ ನಕ್ಕು, ಬೇಜಾರು ಮಾಡಿಕೊಂಡು ಸುಮ್ಮನಾದೆ..! ಇದನ್ನೂ ಓದಿ: ಉರಿ ಬಿಸಿಲ ಕಡಲಲ್ಲಿ ಅಲೆಯಾಗಿ ಬಂದ ನಗು..!
ನೀನು ಹೇಳಿದಂತೆ ನಾನು ನಿನ್ನನ್ನ ಮರೆತಿಲ್ಲ ರೂಪ.. ಮರೆಯೋದು ಇಲ್ಲ..! ನೀನೇ ಹೇಳಿದ್ಯಲ್ಲ.. ನಾನು ಖುಷಿಯಿಂದ ಇರೋದು ನಿನಗೆ ಇಷ್ಟ ಇಲ್ವಾ? ನಾನು ಖುಷಿಯಿಂದ ಇರಬೇಕು ಅಂದ್ರೆ ನನ್ನಿಂದ ದೂರ ಹೋಗ್ಬಿಡು ಗೋಪಾಲ ಅಂತ… ನನಗೆ ಬೇಕಾಗಿದ್ದು, ನೀನು ಹಕ್ಕಿಯಂತೆ ಹಾರಾಡೋದು…. ಹೂವಿನಂತೆ ಸಂಭ್ರಮಿಸೋದು… ಅದನ್ನ ದೂರದಲ್ಲೆಲ್ಲೋ ಚಿಟ್ಟೆ ಸಂಭ್ರಮಿಸುವುದನ್ನು ಹೂದೋಟದಲ್ಲಿ ಕುಳಿತು ಮನಸ್ಸು, ಹೃದಯಕ್ಕೆ ತುಂಬಿಕೊಂಡು ಕವಿಯಾಗುವುದು… ಇಷ್ಟೇ ಸಾಕು ಅಂದ್ಕೊಂಡು ಸುಮ್ಮನಾದವನು ನಾನು..! ನಿನ್ನ ಮೇಲೆ ಖಂಡಿತ ಬೇಜಾರಿಲ್ಲ…. ನಿನ್ನ ಮಾತು, ನಗು, ಸಿಟ್ಟು ಈಗಲೂ ನನ್ನ ಜೊತೆಗಿವೆ… ನಿನ್ನ ಆ ಸಿಟ್ಟಿನ ಕೆಂಪು ಮೂಗು… ಕವಿತೆ ಬರೆಯುವಾಗ ಪೆನ್ನಿನ ಮುಂದೆಯೇ ಇರುತ್ತದೆ…!
ನೀನು ಹೋಗು ಅಂದಾಗ… ನನಗೆ ಕಂಡಿದ್ದು ನಿನ್ನ ಸಂಭ್ರಮ…, ನನ್ನ ಇರುವಿಕೆ, ನನ್ನ ಮಾತು, ನನ್ನ ಪ್ರೀತಿ ನಿನಗೆ ಉಸಿರು ಕಟ್ಟಿಸುತ್ತಿದೆ ಅಂದ್ರೆ.. ಅಲ್ಲಿಂದ ದೂರ ಹೋಗೋದೆ ಒಳ್ಳೆಯದಲ್ವಾ..? ನೀನು ಮಾತ್ರ ಅಲ್ಲ.. ಯಾರಿಗೇ ಆಗಲಿ.. ನಮ್ಮಿಂದ ಅವರಿಗೆ ತೊಂದರೆ ಆಗ್ತಿದೆ ಅಂದ್ರೆ.. ಅಲ್ಲಿಂದ ಸುಮ್ಮನೇ ಹೊರಟು ಸೋಜಿಗವಾಗಿಯೇ ಉಳಿದ್ಬಿಡ್ಬೇಕು… ಅನ್ನೋದು ನನ್ನ ಪಾಲಿಸಿ..! ಹಾಗಾಗಿನೇ ಸುಮ್ನೆ ಬಂದ್ಬಿಟ್ಟೆ.. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
– ಗೋಪಾಲಕೃಷ್ಣ