ಮಂಡ್ಯ: ಕಾಶ್ಮೀರದಲ್ಲಿನ (Jammu Kashmir) ನರಮೇಧಕ್ಕೆ ಆರ್ಟಿಕಲ್ 370 ತೆಗೆದಿದ್ದೇ ಕಾರಣ ಎಂದು ಹೇಳಿಕೆ ನೀಡಿದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisidde gowda) ಇದೀಗ ಕ್ಷಮೆಯಾಚಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಯ (Pahalgam Terrorist Attack) ಬಳಿಕ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ರಮೇಶ್ ಬಂಡಿಸಿದ್ದೇಗೌಡ ಜನರಿಂದ ಛೀಮಾರಿಗೊಳಗಾಗಿದ್ದರು.
ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್‌ನಲ್ಲಿ (KRS) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಾಗೆ ಮಾತನಾಡಬಾರದಿತ್ತು, ನನ್ನ ಮಾತಿನಿಂದ ಎಲ್ಲರಿಗೂ ನೋವಾಗಿದೆ. ಹೀಗಾಗಿ ನನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ
ದೇಶದಲ್ಲಿ ಆಯಾ ಸರ್ಕಾರಗಳು ಭದ್ರತೆಯನ್ನು ಹೆಚ್ಚಿಸಬೇಕು. ಸದ್ಯ ಕಾಶ್ಮೀರದಲ್ಲಿ ನರಮೇಧ ಮಾಡಿರುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಘಟನೆಯಲ್ಲಿ ಸಾವನ್ನಪ್ಪಿರುವವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯ ಕುರಿತು ಏ.23 ರಂದು ಮಾತನಾಡಿದ್ದ ಅವರು, ಆರ್ಟಿಕಲ್ 370 ತೆಗೆದಿರುವುದೇ ಪಹಲ್ಗಾಮ್ ಘಟನೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅತಿಯಾದ ಆತ್ಮವಿಶ್ವಾಸದಿಂದ ಈ ಘಟನೆ ನಡೆದಿದೆ ಎನ್ನುವ ಮೂಲಕ ಘಟನೆಗೆ ಪರೋಕ್ಷವಾಗಿ ಬಿಜೆಪಿ ಕಾರಣ ಎಂದಿದ್ದರು.
ಆರ್ಟಿಕಲ್ 370 ತೆಗೆಯುವ ಮುನ್ನ ಕಾಶ್ಮೀರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು. ಅವರ ದುಡುಕಿನ ನಿರ್ಧಾರದಿಂದ ಈ ಘಟನೆ ನಡೆದಿದೆ. ಜನರ ಭಾವನೆ ಅರ್ಥ ಮಾಡಿಕೊಂಡು ಆರ್ಟಿಕಲ್ 370 ತೆಗೆಯಬೇಕಿತ್ತು ಎಂದು ಕಿಡಿಕಾರಿದ್ದರು.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್