– ಸಾವರ್ಕರ್ ಬ್ರಿಟಿಷರ ಸೇವಕ ಎಂದಿದ್ದ ರಾಗಾ
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ (Supreme Court) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಭವಿಷ್ಯದಲ್ಲಿ ಸಾರ್ವಕರ್ (VD Savarkar) ಅವರಿಗೆ ಅವಮಾನ ಮಾಡುವ ಯಾವುದೇ ಹೇಳಿಕೆಗಳನ್ನು ನೀಡಿದರೆ ರಾಹುಲ್ ವಿರುದ್ಧ ಸ್ವಯಂ ಪ್ರೇರಿತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿದೆ.
ಇಂದು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ ಮನಮೋಹನ್ ಅವರನ್ನೊಳಗೊಂಡ ಪೀಠ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ಪೀಠ ಸಾವರ್ಕರ್ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ವಿಚಾರಣೆಗೆ ತಡೆ ನೀಡಿತು. ಇದನ್ನೂ ಓದಿ: ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ
ಆರಂಭದಲ್ಲೇ ಸಾವರ್ಕರ್ ಬ್ರಿಟಿಷರ ಸೇವಕ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ನ್ಯಾ. ದತ್ತ ಆಕ್ಷೇಪ ವ್ಯಕ್ತಪಡಿಸಿದರು. ಗಾಂಧೀಜಿ ವೈಸ್‌ರಾಯ್‌ಗೆ ಬರೆದ ಪತ್ರಗಳಲ್ಲಿ ʼನಿಮ್ಮ ನಿಷ್ಠಾವಂತ ಸೇವಕʼ ಎಂಬ ಪದವನ್ನು ಬಳಸಿದ್ದರಿಂದ ಮಹಾತ್ಮಾ ಗಾಂಧೀಜಿ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯಬಹುದೇ ಎಂದು ನ್ಯಾ. ದತ್ತ ಅವರು ರಾಹುಲ್ ಪರ ವಕೀಲ ಸಿಂಘ್ವಿ ಅವರಿಗೆ ಪ್ರಶ್ನಿಸಿದರು.
ನಿಮ್ಮ ಕಕ್ಷಿದಾರರ ಅಜ್ಜಿ (ಇಂದಿರಾ ಗಾಂಧಿ) ಪ್ರಧಾನಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರರಾದ ಸಾವರ್ಕರ್ ಅವರನ್ನು ಹೊಗಳಿ ಪತ್ರವನ್ನು ಕಳುಹಿಸಿದ್ದಾರೆ ಎನ್ನುವುದು ನಿಮ್ಮ ಕಕ್ಷಿದಾರರಿಗೆ ತಿಳಿದಿದೆಯೇ ಎಂದು ಕೇಳಿದರು.
ಭಾರತದ ಇತಿಹಾಸ ಅಥವಾ ಭೌಗೋಳಿಕತೆಯ ಬಗ್ಗೆ ನಿಮಗೆ ಏನೂ ತಿಳಿಯದೇ ಇರುವಾಗ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿತು.
2022ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸಾವರ್ಕರ್ ಅವರನ್ನು ಬ್ರಿಟಿಷರ ಸೇವಕ ಎಂಬುದಾಗಿ ಕರೆದಿದ್ದರು. ಈ ಹೇಳಿಕೆಯನ್ನು ಖಂಡಿಸಿ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆಗೆ ರಾಹುಲ್ ಗೈರಾಗಿದ್ದಕ್ಕೆ ಕೋರ್ಟ್ 200 ರೂ. ದಂಡ ವಿಧಿಸಿತ್ತು.