ಬೆಂಗಳೂರು: ನೂರಾರು ನಟರು, ಸೂಪರ್ ಸ್ಟಾರ್‌ಗಳು ಬಂದಿದ್ದಾರೆ ಆದರೆ ಡಾ.ರಾಜಕುಮಾರ್ ಏರಿದ ಎತ್ತರಕ್ಕೆ ಎಲ್ಲರೂ ಏರಲು ಕಷ್ಟಸಾಧ್ಯ. ಕನ್ನಡಿಗರಾಗಿ ಡಾ.ರಾಜ್‌ಕುಮಾರ್ (Dr. Rajkumar) ಜನಿಸಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಪುಣ್ಯ. ಅವರು ಕನ್ನಡದ ಸಂಸ್ಕೃತಿಯ ಪ್ರತೀಕವಾಗಿದ್ದರು ಎಂದು ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ 97 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಇತಿಹಾಸದಲ್ಲಿ ಕೆಲವರು ಛಾಪು ಮೂಡಿಸಿರುವಂತೆ ಡಾ.ರಾಜ್ ಕುಮಾರ್ ಅವರು ಚಿತ್ರರಂದಲ್ಲಿ ಛಾಪು ಮೂಡಿಸಿದ್ದಾರೆ. ಜನಸಾಮಾನ್ಯರ ನೋವು ನಲಿವುಗಳಿಗೆ ಡಾ.ರಾಜ್ ಸ್ಪಂದಿಸಿದ ಮಾದರಿಯಲ್ಲಿ ಮತ್ತೊಂದು ಉದಾಹರಣೆ ಇಲ್ಲ ಎಂದರು. ಇದನ್ನೂ ಓದಿ: ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇಡೀ ಜಗತ್ತಿನಾದ್ಯಂತ ಗುರುತಿಸುವಂತೆ ಬೆಳೆದ ಪರಿ ಸಾಮಾನ್ಯವಾದುದಲ್ಲ. ಇಂದಿಗೂ ಅವರ ನಟನೆಗೆ, ಗಾಯನಕ್ಕೆ ಮನಸೋಲದವರೇ ಇಲ್ಲ. ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡದ ಕಾರ್ಯಕರ್ತನಾಗಿ ಮೊದಲು ಧ್ವನಿ ಎತ್ತಿ, ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಹೇಳಿದರು.
ನಟರು ಬದುಕಿದ್ದಾಗ ಅಭಿಮಾನಿಗಳಿರುವುದು ಸಹಜ. ಮರಣದ ನಂತರವೂ ರಾಜ್‌ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿರುವುದು ನೋಡಿದರೆ ಅದೊಂದು ದೇವರು ಕೊಟ್ಟಂತಹ ವರವೇ ಸರಿ. ಯಾವುದೇ ಜಾತಿ, ಯಾವುದೇ ಧರ್ಮ ಎನ್ನುವುದು ಇಲ್ಲ. ಎಲ್ಲರೂ ಸಹ ರಾಜ್‌ಕುಮಾರ್ ಅವರ ಅಭಿಮಾನಿಗಳೇ. ಅವರು ಸರಳ, ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನವನಿರ್ದೇಶಕನ ಸಿನಿಮಾಗೆ ಕೈಜೋಡಿಸಿದ ಶಿವಣ್ಣ
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ರಾಜ್‌ಕುಮಾರ್ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ನಾನಾ ಬಗೆಯ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂಬ ಆಸೆ ಅವರದಾಗಿತ್ತು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ಅವರು ಭೌತಿಕವಾಗಿ ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತವಾಗಿವೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ
ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ ಮಾತನಾಡಿ, ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೂ ಆ ಯಶಸ್ಸಿನ ಅಮಲನ್ನು ತಲೆಗೆ ಏರಿಸಿಕೊಳ್ಳದೇ ಅತ್ಯಂತ ಸರಳವಾಗಿ ಬದುಕಿದವರು ರಾಜ್‌ಕುಮಾರ್. ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ನಾವು ನೋಡಿದ ಅನೇಕ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಂತಹ ವ್ಯಕ್ತಿತ್ವಗಳನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ ಎಂದು ಅವರ ಸಾಧನೆಯನ್ನು ಹಾಡಿಹೊಗಳಿದರು.
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬಾರದಂತೆ ನಿಷೇಧ ತರುವಲ್ಲಿ ರಾಜ್‌ಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಈ ನಿಲುವಿನಿಂದಾಗಿಯೇ ಕನ್ನಡ ಚಿತ್ರರಂಗ, ಚಿತ್ರೋದ್ಯಮ ಉಳಿದು ಅನೇಕ ಕಲಾವಿದರು, ತಂತ್ರಜ್ಞರು ಬೆಳೆಯಲು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ರಾಜ್‌ಕುಮಾರ್ ಇರದಿದ್ದರೆ ಚಿತ್ರೋದ್ಯಮ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಅಂದು ರಾಜ್ಯದಲ್ಲಿ ಇದ್ದ 182 ಚಿತ್ರಮಂದಿಗಳು, ಅವರ ಪರಿಶ್ರಮದಿಂದಾಗಿ ಸುಮಾರು 1800 ಚಿತ್ರ ಮಂದಿರಗಳಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ನೀಡಿ, ಚಿತ್ರೋದ್ಯಮ ಲಾಭದಾಯಕವಾಗಿ ಬೆಳೆಯುವಂತಾಯಿತು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಟೆಂಟ್‌ಗಳು ತಲೆ ಎತ್ತಿದವು ಎಂದರು. ಇದನ್ನೂ ಓದಿ: ‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ
ಇಂದು ಉತ್ತಮ ಚಿತ್ರಗಳ ಕೊರತೆಯಿಂದಾಗಿ ಚಿತ್ರಮಂದಿರಗಳು ಮುಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಚಿತ್ರೋದ್ಯಮದ ಭವಿಷ್ಯ ಆತಂಕ ಹುಟ್ಟಿಸುತ್ತದೆ. ರಾಜ್ ಅಭಿನಯದ ಚಿತ್ರಗಳು ಕನ್ನಡಿಗರನ್ನಷ್ಟೇ ಅಲ್ಲಾ, ಎಲ್ಲಾ ಭಾರತೀಯರನ್ನು ಸೆಳೆದವು. ಶಂಕರ್ ಗುರು ಸೇರಿ ಅನೇಕ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ತಲುಪಿವೆ. ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಅವರು ನಟಿಸಿದ ಎಲ್ಲಾ 205 ಚಿತ್ರಗಳು ‘ಯು’ ಸರ್ಟಿಫಿಕೇಟ್ ಪಡೆದದ್ದು ಈಗ ಇತಿಹಾಸ. ಅವರ ಸಮಕಾಲೀನರಾಗಿ ನಾವೆಲ್ಲಾ ಜೀವಿಸಿದ್ದು ಹೆಮ್ಮೆ ಹಾಗೂ ಸಾರ್ಥಕ ಸಂಗತಿ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲಕ್ಕಾಗಿ ದುಡಿದ ಮೇರು ಚೇತನ ಡಾ.ರಾಜ್‌ಕುಮಾರ್ ಆಗಿದ್ದರು. ಅವರ ಬೆನ್ನ ಹಿಂದಿನ ಶಕ್ತಿಯಾಗಿ ಅವರ ಸಹೋದರ ಎಸ್.ಪಿ.ವರದರಾಜ್ ನಿರ್ವಹಿಸಿದ ಕಾರ್ಯವೂ ಸ್ಮರಣೀಯ ಎಂದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ಡಾ.ರಾಜ್, ಅಮಿತಾಬ್ ಬಚ್ಚನ್, ಶಿವಾಜಿ ಗಣೇಶನ್ ಮೊದಲಾದ ಹಿರಿಯ ನಟರು ಪ್ರೇಕ್ಷಕರೊಂದಿಗೆ ನೇರ ಸಂಬಂಧ, ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿ ದೊಡ್ಡ ಹೆಸರು, ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಮರಾಠಿ ಮಾಧ್ಯಮದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದ ತಾವು ಕರ್ನಾಟಕ ಕೇಡರ್‌ಗೆ ಐಪಿಎಸ್ ಅಧಿಕಾರಿಯಾಗಿ ಬಂದಾಗ ಕನ್ನಡ ಕಲಿಯಲು ಡಾ.ರಾಜ್‌ಕುಮಾರ್ ಚಲನಚಿತ್ರಗಳೇ ಗುರುವಾದವು. ಡಾ.ರಾಜ್ ಸಂಭಾಷಣೆಗಳೇ ಸ್ಫೂರ್ತಿ, ಪ್ರೇರಣೆಯಾದವು ಎಂದರು.
ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ, 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು. ಅಂದಿನಿಂದ ರಾಜ್‌ಕುಮಾರ್ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಪ್ರತಿ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ
ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ರಾಮಚಂದ್ರ ಹಡಪದ, ಸ್ಪರ್ಶ ಹಾಗೂ ತಂಡದವರಿಂದ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.