ಹೈದರಾಬಾದ್: ಟ್ರೆಂಟ್ ಬೌಲ್ಟ್ ಬೆಂಕಿ ಬೌಲಿಂಗ್ ದಾಳಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಮಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 4ನೇ ಗೆಲುವು ಕಂಡಿರುವ ಮುಂಬೈ ಪಡೆ ಅಂಕಪಟ್ಟಿಯಲ್ಲೂ ಜಿಗಿತ ಕಂಡಿದೆ.
12th April – MI at No.9 position.
23rd April – MI at No.3 position.
WHAT A COMEBACK BY MI. 🥶 pic.twitter.com/WI7C9kpbtG
— Mufaddal Vohra (@mufaddal_vohra) April 23, 2025
6ನೇ ಸ್ಥಾನದಲ್ಲಿದ್ದ ಹಾರ್ದಿಕ್ ಪಾಂಡ್ಯ ಬಳಗ ಇದೀಗ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲಿನೊಂದಿಗೆ 10 ಅಂಕಗಳನ್ನು ಕಲೆ ಹಾಕಿದೆ. +0.67 ನೆಟ್‌ರನ್‌ರೇಟ್‌ನೊಂದಿಗೆ 3ನೇ ಸ್ಥಾನಕ್ಕೇರಿದೆ. ಹೀಗಾಗಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 3ರಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ವಿರುದ್ಧ ಪರಾಭವಗೊಂಡ ಸನ್ ರೈಸರ್ಸ್ ತಂಡ ಆಡಿರುವ 8 ಪಂದ್ಯಗಳಿಂದ 2 ಗೆಲುವಿನೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಗೆಲುವಿಗೆ 144 ರನ್ ಗಳ ಗುರಿ ಪಡೆದ ಮುಂಬೈ ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 26 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿತು. ಮುಂಬೈ ಪರ ಆರಂಭಿಕ ರಾನ್ ರಿಕಲ್ಟನ್ ಬೇಗನೇ ಔಟಾದರೂ ರೋಹಿತ್ ಶರ್ಮಾ(70) ಮತ್ತು ವಿಲ್ ಜಾಕ್ಸ್ (22) ತಂಡದ ಇನ್ನಿಂಗ್ಸ್ ಕಟ್ಟಿದರು. ವಿಲ್ ಜಾಕ್ಸ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ (40) ಅವರು ರೋಹಿತ್ ಶರ್ಮಾ ಅವರ ಜೊತೆ ಸೇರಿ ಹೈದರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದರು.
ಈ ಸೀಸನ್ ನಲ್ಲಿ 2ನೇ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ 46 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 70 ರನ್ ಗಳನ್ನು ಚಚ್ಚಿದರು. ಇನ್ನು ಸೂರ್ಯಕುಮಾರ್ ಅವರು 19 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 40 ರನ್ ಗಳಿಸಿ ಅಜೇಯರಾಗುಳಿದರು.
ಸನ್ ರೈಸರ್ಸ್ ಬ್ಯಾಟಿಂಗ್ ವೈಫಲ್ಯ:
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡಲೇ ಇಲ್ಲ. ಅಗ್ರಕ್ರಮಾಂಕದ ಟ್ರಾವಿಸ್ ಹೆಡ್ (0), ಇಶಾನ್ ಕಿಶನ್(1), ಅಭಿಷೇಕ್ ಶರ್ಮಾ(8), ನಿತೀಶ್ ಕುಮಾರ್ ರೆಡ್ಡಿ (2), ಅನಿಕೇತ್ ವರ್ಮಾ (12) ಮೊದಲಾದ ಘಟಾನುಘಟಿ ಬ್ಯಾಟರ್ ಗಳು ಮುಂಬೈ ಬಿಗಿ ದಾಳಿಗೆ ತತ್ತರಿಸಿದರು. ಹೈದರಾಬಾದ್ ತಂಡ ಕೇವಲ 35 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸ್ಱೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸನ್ ಜೊತೆ ಸೇರಿ ಹೈದರಾಬಾದ್ ನ ಮಾನ ಕಾಪಾಡಿದರು. ಕ್ಲಾಸನ್ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 71 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಅಭಿನವ್ ಮನೋಹರ್ ಅವರು 37 ಎಸೆತಗಳಿಂದ 2 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 43 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಆದರ. ಅಂತಿಮವಾಗಿ ಸನ್ ರೈಸರ್ಸ್ 8 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 26 ರನ್ ಗೆ 4 ವಿಕೆಟ್ ಮತ್ತು ದೀಪರ್ ಚಾಹಲ್ 12 ರನ್ ಗಳಿಗೆ 2 ವಿಕೆಟ್ ಕಹಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಹಂಚಿಕೊಂಡರು.