ವಾರದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಉಗ್ರನ ಗುಂಡಿಗೆ ಬಲಿಯಾಗಿದ್ದು, ಅವರ ಪತ್ನಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮದುವೆಯಾಗಿ ವಾರ ಕಳೆದಿಲ್ಲ, ಪತ್ನಿ ಕೈಗೆ ಹಾಕಿದ್ದ ಮೆಹಂದಿ ಬಣ್ಣ ಮಾಸಿಲ್ಲ ಅಷ್ಟರಲ್ಲೇ ಬದುಕು ದುರಂತ ಅಂತ್ಯ ಕಂಡಿದೆ… ಇದು ಲೆಫ್ಟಿನೆಂಟ್ ವಿನಯ್ ನರ್ವಾಲ್ (Vinay Narwal), ಹಿಮಾಂಶಿ (Himanshi Narwal) ಅವರ ಬದುಕಿನ ದುರಂತ ಕಥೆ..
ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಲ್ಲು ಹೃದಯದವವರನ್ನ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಪಹಲ್ಗಾಮ್ ದಾಳಿಯಲ್ಲಿ ಮಡಿದ ನವವಿವಾಹಿತ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ಹರ್ಯಾಣದ ಕರ್ನಾಲ್‌ನ ಹುಟ್ಟೂರಿಗೆ ತೆಗೆದುಕೊಂಡು ಹೋಗುವ ಮೊದಲು ದೆಹಲಿಯ ಏರ್‌ಪೋರ್ಟ್‌ಗೆ ತಂದಾಗ ಪತ್ನಿ ಹಿಮಾಂಶಿ, ಪತಿಯ ಶವ ಪೆಟ್ಟಿಗೆ ಹಿಡಿದು ಬಿಕ್ಕಿ ಬಿಕ್ಕಿ ಅತ್ತರು. ಆಕೆಯನ್ನು ಸಮಧಾನಪಡಿಸಿದಷ್ಟೂ ದುಃಖದ ಮಡು ಹೆಚ್ಚಾಗುತ್ತಲೇ ಇತ್ತು. ಬಳಿಕ ತಂದೆ ಸಹೋದರ ಇಬ್ಬರೂ ಸೇರಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು. ಈ ವೇಳೆ ʻಜೈಹಿಂದ್ʼ ಎನ್ನುತ್ತಾ ಪತಿಯ ಪಾರ್ಥೀವ ಶರೀರವನ್ನು ಬೀಳ್ಕೊಟ್ಟರು. ಈ ದೃಶ್ಯ ಕಂಡು ಇಡೀ ದೇಶದ ಜನರೇ ಕಂಬನಿ ಮಿಡಿದಿದ್ದಾರೆ.
ಏಪ್ರಿಲ್ 16 ರಂದು ವಿನಯ್ ಹಾಗೂ ಹಿಮಾಂಶಿ ಅವರ ವಿವಾಹವಾಗಿತ್ತು. ಮೂರು ದಿನಗಳ ನಂತರ ಆರತಕ್ಷತೆ ನಡೆಯಿತು. ಆ ಬಳಿಕ ಜಮ್ಮು ಕಾಶ್ಮೀರಕ್ಕೆ ಹನಿಮೂನ್‌ಗೆ ತೆರಳಿದ್ದರು. ಇಬ್ಬರು ಪಹಲ್ಗಾಮ್ ಬಳಿಯ ಬೈಸರನ್‌ನ ರಮಣೀಯ ತಾಣದಲ್ಲಿ ಭೇಲ್‌ಪುರಿ ತಿನ್ನುತ್ತಿದ್ದಾಗ ಭಯೋತ್ಪಾದಕನೊಬ್ಬ ಲೆಫ್ಟಿನೆಂಟ್ ವಿನಯ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ʻನಿನು ಮುಸಲ್ಮಾನನಾ? ಅಂತ ಕೇಳಿ ಗುಂಡು ಹಾರಿಸಿದ್ದಾನೆʼ, ಬಂದೂಕಿನಲ್ಲಿ ಸಿಡಿದ ಗುಂಡು ವಿನಯ್ ತಲೆಯನ್ನ ಸೀಳಿಕೊಂಡು ಹಿಮಾಂಶಿ ಮುಖಕ್ಕೆ ರಕ್ತ ಚಿಮ್ಮಿತ್ತು. ವಿವಾಹದ ಒಂದು ವಾರದೊಳಗೆ ಭಯಾನಕ ಘಟನೆಯೊಂದು ಸಂಭವಿಸಿತು.
ʻಜೈ ಹಿಂದ್ʼ ಘೋಷಣೆ
ಬುಧವಾರ ಲೆಫ್ಟಿನೆಂಟ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಯಿತು. ಹಿಮಾಂಶಿ ಪಾರ್ಥಿವ ಶರೀರದ ಪಕ್ಕದಲ್ಲಿ ನಿಂತು ಕಣ್ಣೀರಿಟ್ಟರು. ಘಟನೆಯಿಂದ ಆಘಾತಗೊಂಡ ಹಿಮಾಂಶಿ, ಪತಿಯ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ʻಜೈ ಹಿಂದ್ʼ ಎಂದು ಘೋಷಣೆ ಕೂಗಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾವು ಅವರ ಬಗ್ಗೆ ಪ್ರತಿಯೊಂದು ರೀತಿಯಲ್ಲಿ ಹೆಮ್ಮೆ ಪಡುವಂತೆ ಮಾಡುತ್ತೇವೆ. ಅವರು ಇರುವುದರಿಂದಲೇ ಜಗತ್ತು ಇನ್ನೂ ಉಳಿದಿದೆ ಎಂದು ಹೇಳಿ ನಂತರ ಪಾರ್ಥಿವ ಶರೀರವನ್ನು ತಬ್ಬಿಕೊಂಡು ದುಃಖಿಸಿದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಹಿಮಾಂಶಿ ಅವರನ್ನು ಸಂತೈಸಿ, ದುಃಖವನ್ನು ಹಂಚಿಕೊಂಡರು. ನರ್ವಾಲ್ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದರು. ಅವರು ಕೊಚ್ಚಿಯಲ್ಲಿ ನೇಮಕಗೊಂಡಿದ್ದರು.