ಹುಬ್ಬಳ್ಳಿ: ಪಾಕಿಸ್ತಾನ (Pakistan) ಪ್ರೋತ್ಸಾಹಿತ ಉಗ್ರಗಾಮಿಗಳು ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Shettar) ಆಕ್ರೋಶ ಹೊರಹಾಕಿದ್ದಾರೆ.
ಪಹಲ್ಗಾಮ್ ದಾಳಿಯ (Pahalgam Attack) ಕುರಿತು ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕೈಗೊಂಡ ಕ್ರಮಗಳಿಂದ ಶಾಂತಿ ನೆಲೆಸಿತ್ತು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಆರಂಭ ಮಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ
ದೇಶದ ಜನತೆ ಕಾಶ್ಮೀರದಲ್ಲಿ (Kashmir) ಶಾಂತಿ ನೆಲೆಸಬೇಕು ಅನ್ನೋ ಇಚ್ಛೆ ಹೊಂದಿದ್ದಾರೆ. ಮೃತ ಕುಟುಂಬದ ಜೊತೆಗೆ ದೇಶ, ಭಾರತ ಸರ್ಕಾರವಿದೆ. ಉಗ್ರಗಾಮಿಗಳ ಹತ್ಯೆಯಾಗುತ್ತದೆ. ಭಾರತ ದೇಶ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅದನ್ನು ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಪಾಕಿಸ್ತಾನ ಅವನತಿ ಆರಂಭವಾಗಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಮೋದಿ ಅವರು ಬಲಾಢ್ಯ ರಾಷ್ಟ್ರ ಕಟ್ಟುತ್ತಿದ್ದಾರೆ. ಮೋದಿ ಅವರು ಆದಷ್ಟು ಬೇಗ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ
ಭದ್ರತಾ ವ್ಯವಸ್ಥೆ ಸರಿಯಿದೆ ಎಂದು ಪ್ರವಾಸಿಗರೇ ಹೇಳಿದ್ದಾರೆ. ಆದರೂ ಈ ಘಟನೆ ನಡೆದಿದೆ. ಯಾವ ಸರ್ಕಾರ ಬಂದಾಗ ಕೂಡಾ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಇರಲಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ಶಾಂತಿ ನೆಲೆಸಿತ್ತು. ಉಗ್ರಗಾಮಿಗಳನ್ನು ನಾಶ ಮಾಡಬೇಕು. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯನ್ನು ನಾಶ ಮಾಡಬೇಕು ಎಂದು ಕಿಡಿಕಾರಿದ್ದಾರೆ.