ಬೆಂಗಳೂರು: ಸ್ಮಾರ್ಟ್ ಮೀಟರ್‌ಗಳ 15 ಸಾವಿರ ಕೋಟಿ ರೂ. ಹಗರಣ (Smart Meter Scam) ಆರೋಪದ ಜಟಾಪಟಿ ಮತ್ತೆ ಶುರುವಾಗಿದೆ. ಈ ಸಲುವಾಗಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಜನಜಾಗೃತಿ ಹಾಗೂ ಆನ್‍ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನವನ್ನು ಬಿಜೆಪಿ (BJP) ಆರಂಭಿಸಿದೆ.
ಸಹಿ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಕಚೇರಿಯಲ್ಲಿ ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ್ (Ashwath Narayan) ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ, ಸರ್ಕಾರದ ಹಗಲುದರೋಡೆಯನ್ನು ಜನತೆಗೆ ತಿಳಿಸಲಿದ್ದೇವೆ. ಈ ಬಗ್ಗೆ ಸೋಮವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಸಿಎಜಿಗೆ, ಪ್ರಿನ್ಸಿಪಲ್ ಆಡಿಟರ್ ಜನರಲ್‍ಗೂ ದೂರು ನೀಡಿದ್ದೇವೆ. ಆದಷ್ಟು ಬೇಗನೆ ತನಿಖೆ ಮಾಡಲು ಕೋರಿದ್ದೇವೆ. ಎಲ್ಲಾ ದಿಕ್ಕಿನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ದೊಡ್ಡ ಹಗರಣ- ಸಚಿವ ಜಾರ್ಜ್ ತಪ್ಪು ಮಾಹಿತಿ ನೀಡಿದ್ದಾರೆ: ಅಶ್ವಥ್ ನಾರಾಯಣ್
ಸಾರ್ವಜನಿಕರು ಇದಕ್ಕೆ ದೂರು ಕೊಡಬಹುದು. ಇಂಧನ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣದ ವಿಷಯವನ್ನು ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇವೆ. ಇದನ್ನು ತಾರ್ಕಿಕ ತುದಿ ಮುಟ್ಟಿಸಲು ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಸದನದಲ್ಲಿ ಹೇಳಿದರೂ ಪ್ರಯೋಜನವಿಲ್ಲ. ಇಂತಹ ಭಂಡಗೆಟ್ಟವರಿಗೆ, ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಇರುವಾಗ ಯಾವ ರೀತಿ ಜನಕ್ಕೆ ನ್ಯಾಯ ಸಿಗಲು ಸಾಧ್ಯ? ಇಷ್ಟ ಬಂದಂತೆ ಮೇಯುವ ಪರಿಸ್ಥಿತಿ ಇದೆ. ಖಜಾನೆ ಕಾಯುವವರೇ ಕನ್ನ ಹಾಕಲು ಶುರು ಮಾಡಿದರೆ, ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ – ಸಚಿವ ಜಾರ್ಜ್ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು