ಚಾಮರಾಜನಗರ: ಮನೆ ಮಂದಿ ಮದುವೆಗೆ ತೆರಳಿ ವಾಪಸ್ ಆಗುವಷ್ಟರಲ್ಲಿ ಕಾಡಾನೆ ದಾಳಿಗೆ ಮನೆಯ ಛಾವಣಿಗಳು, ಮನೆಯ ಒಂದು ಪಾರ್ಶ್ವ ಧ್ವಂಸ ಆಗಿರುವ ಘಟನೆ ಚಾಮರಾಜನಗರ (Chamarajanagra) ತಾಲೂಕಿನ ಮೂಕನಪಾಳ್ಯದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ತಡರಾತ್ರಿ ಕಾಡಾನೆ ಹಿಂಡು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗೆ ಹಾನಿ ಮಾಡಿದ್ದು, ರೈತ ಕುಟುಂಬ ಕಂಗಲಾಗಿದೆ. ಗ್ರಾಮದ ನಾನಕ್ ಭಾಯಿ ಅವರ ಜಮೀನಿಗೆ ನುಗ್ಗಿರುವ ಕಾಡಾನೆ ಹಿಂಡು ಟೊಮೆಟೊ, ಬೀನ್ಸ್ ಫಸಲನ್ನು ತುಳಿದು ತಿಂದು ನಾಶ ಮಾಡಿದೆ. ಜೊತೆಗೆ, 1 ಹಲಸಿನ ಮರ, 1 ಮಾವಿನಮರ, 8 ತೆಂಗಿನ ಸಸಿಗಳನ್ನು ಮುರಿದು ತುಳಿದು ಹಾಕಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ | ಹಾರಿ ಬಿದ್ದು ಪ್ರಾಣಬಿಟ್ಟ ಮಹಿಳೆ – ವಿಡಿಯೋ ವೈರಲ್
ನಾಗೇಶ್ ನಾಯಕ್ ಮಾತನಾಡಿ, ಈ ಭಾಗದಲ್ಲಿ ನಿರಂತರವಾಗಿ ಕಾಡಾನೆ ದಾಳಿ ನಡೆಯುತ್ತಿದೆ. ಅರಣ್ಯ ಇಲಾಖೆಯವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಮನೆ ವಾಪಸಾಗುವಷ್ಟರಲ್ಲಿ ಕಾಡಾನೆ ಹಿಂಡು ಜಮೀನಿಗೆ ನುಗ್ಗಿ ಮನೆ, ಫಸಲು ನಾಶ ಮಾಡಿದೆ. ಈಗ ವಾಸ ಮಾಡಲು ನಮಗೆ ಮನೆ ಇಲ್ಲ. ಅರಣ್ಯ ಇಲಾಖೆಯವರು ಬಂದು ಪರಿಶೀಲಿಸಿ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಜಮೀನುಗಳಿಗೆ ಕಾಡಾನೆ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.