ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಪ್ರಕರಣ; ಬ್ರಾಹ್ಮಣ ಸಮುದಾಯದ ಆಕ್ರೋಶದಲ್ಲಿ ತಪ್ಪಿಲ್ಲ: ಎಂ.ಸಿ ಸುಧಾಕರ್

Public TV
2 Min Read
M C Sudhakar

– ಅಮಾನವೀಯವಾಗಿ ನಡೆದುಕೊಂಡವರ ವಿರುದ್ಧ ಕ್ರಮದ ಎಚ್ಚರಿಕೆ

ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ಕೊಡದೇ ಇರುವುದಕ್ಕೆ ಬ್ರಾಹ್ಮಣ ಸಮುದಾಯ (Brahmin community) ಆಕ್ರೋಶ ಮಾಡುವುದರಲ್ಲಿ ತಪ್ಪಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ (M C Sudhakar) ಹೇಳಿದ್ದಾರೆ.

ಈ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ (Shivamogga) ಮತ್ತು ಬೀದರ್‌ನಲ್ಲಿ (Bidar) ಈ ರೀತಿ ಘಟನೆ ಆಗಿದೆ ಎಂದು ಬೆಳಗ್ಗೆ ನಮ್ಮ ಸ್ನೇಹಿತರು ಹೇಳಿದರು. ಇದರಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ಇರುತ್ತದೆ. ಕೆಇಎಯಿಂದ ಜನಿವಾರ ತೆಗೆಸಿ ಬರೆಸುವಂತಹ ನಿಯಮ ಇಲ್ಲ ಎಂದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

ಶಿವಮೊಗ್ಗ ಎಡಿಸಿ ಜನಿವಾರ ತೆಗೆಸಿ ಪರೀಕ್ಷೆ ಬರೆಸಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಸತ್ಯಾಸತ್ಯತೆ ತಿಳಿಯುತ್ತೇನೆ. ಈ ರೀತಿ ಸೂಚನೆ ಕೊಡಲು ನಾವು ಅವಿವೇಕಿಗಳಲ್ಲ. ಆ ರೀತಿ ಜನಿವಾರ ತೆಗೆಸಿದ್ದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಇದರ ವರದಿಯನ್ನು ನಾನು ತರಿಸಿಕೊಳ್ಳುತ್ತೇನೆ. ಇದನ್ನು ನಾವು ಒಪ್ಪುವುದಿಲ್ಲ. ಈ ರೀತಿ ಮಾಡಿರುವುದು ಸರಿ ಎಂದು ಹೇಳುವಂತಹ ಕೀಳುಮಟ್ಟದಲ್ಲಿ ನಾವು ಇಲ್ಲ. ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳು ಇಂತಹ ಸೆಂಟರ್, ಇಂತಹ ಅಧಿಕಾರಿ ಎಂದು ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಎಕ್ಸಾಂ ಬರೆಯೋಕೆ ಆಗುತ್ತಾ? – ಚಕ್ರವರ್ತಿ ಸೂಲಿಬೆಲೆ

ಈ ವಿಚಾರವಾಗಿ ಬ್ರಾಹ್ಮಣ ಸಮುದಾಯ ಆಕ್ರೋಶ ಮಾಡುವುದರಲ್ಲಿ ತಪ್ಪಿಲ್ಲ. ಯಾವುದೇ ಧರ್ಮದ ನಂಬಿಕೆಗೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬಾರದು. ಈ ರೀತಿ ಆಗಿಲ್ಲ ಎಂದು ಶಿವಮೊಗ್ಗ ಎಡಿಸಿ ಹೇಳುತ್ತಿದ್ದಾರೆ. ನಾನು ತನಿಖೆ ಮಾಡಿಸುತ್ತೇನೆ. ನಿನ್ನೆ ಅಥವಾ ಮೊನ್ನೆ ಇಂತಹ ಘಟನೆ ಆಗಿದೆಯಾ ಎಂದು ಗೊತ್ತಿಲ್ಲ. ಅಮಾನವೀಯವಾಗಿ ನಡೆದುಕೊಂಡಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಅಧಿಕಾರಿಗಳು ಆಗಿಲ್ಲ ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳು ಆಗಿದೆ ಅಂತಾ ಇದ್ದಾರೆ. ಇಂತಹ ಸೆಂಟರ್‌ನಲ್ಲಿ ನಡೆದಿದೆ ಎಂದು ಗೊತ್ತಾದರೆ ಖಂಡಿತಾ ತನಿಖೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಏನಿದು ಘಟನೆ?
ಸಿಇಟಿ ಪರೀಕ್ಷೆಗಾಗಿ (CET Exam) ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಸಿಇಟಿ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿದೆ. ಈ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಅಕ್ಕ ಸಾಕ್ಷರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದು ಖಂಡನೀಯ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ.

ವರ್ಷಪೂರ್ತಿ ಕಷ್ಟ ಪಟ್ಟು ಅಧ್ಯಯನ ಮಾಡಿ ಒಳ್ಳೆ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಛಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ. ಅಖಿಲ ಕನರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿಶ್ವ ಸಂಘಟನೆಗೆ ಒಕ್ಕೂಟವು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ.

ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ಹಿಂದೂ ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ. ಘನತೆ ಗೌರವ ಗೊತ್ತಿಲ್ಲದ ಧರ್ಮ ವಿರೋದಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ವಿನಂತಿಸಿದೆ.

Share This Article