ಉಡುಪಿ: ವಕ್ಫ್ ಕಾಯ್ದೆಯನ್ನು (Waqf Act) ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದರು.
ವಕ್ಫ್ ಕಾಯ್ದೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಮಂಡಳಿಗೆ ಕೋರ್ಟಿಗೆ ಹೋಗುವ ಅಧಿಕಾರ ಇಲ್ಲ. ಬಿಲ್ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ಜಾರಿಗೆ ತರಲಾಗಿದೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ. ಎರಡು ಲಕ್ಷ ಕೋಟಿ ರೂಪಾಯಿ ವಕ್ಫ್ ಆಸ್ತಿ ಶ್ರೀಮಂತ ರಾಜಕಾರಣಿಗಳ ಪಾಲಾಗಿದೆ. ಶ್ರೀಮಂತ ರಾಜಕಾರಣಿಗಳು ಮೆಡಿಕಲ್ ಕಾಲೇಜು, ಶಾಲೆ ಆಸ್ಪತ್ರೆ-ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಬಾಡಿಗೆ ಅಥವಾ ಲೀಸ್‌ಗೆ ಪಡೆದು ಎರಡು ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದವರು ಈ ಮಾಹಿತಿಯನ್ನು ನೀಡುತ್ತಿದ್ದಾರೆ. ಬಡವರು, ಮಹಿಳೆಯರಿಗೆ ಮಕ್ಕಳ ಶಿಕ್ಷಣಕ್ಕೆ ವಕ್ಫ್ ಆಸ್ತಿ ಬಳಕೆಯಾಗಬೇಕು. ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ಕಾಯ್ದೆ ಇದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್ ಹಾಕುತ್ತಿರಲಿಲ್ಲ: ಮೋದಿ
ಸರ್ಕಾರ ಉರುಳಿಸಲು ಮೋದಿ, ಅಮಿತ್ ಶಾ ಷಡ್ಯಂತ್ರ ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ. ಒಗ್ಗಟ್ಟಿಲ್ಲ ಅಂತ ಖರ್ಗೆಗೂ ಅನಿಸಿರಬೇಕು ಹಾಗಾಗಿ ಈ ಹೇಳಿಕೆ ಕೊಟ್ಟಿರಬಹುದು. ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಮೋದಿ ಆಡಳಿತದಲ್ಲಿ ಈ ಥರದ ದುಷ್ಕೃತ್ಯ ಎಲ್ಲೂ ಆಗಿಲ್ಲ. ಮೋದಿ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಇಲ್ಲ. ಖರ್ಗೆ ಬಹಳ ದೊಡ್ಡವರು ಇತಿಹಾಸ ಗೊತ್ತಿದ್ದವರು. ನಾವಾದ್ರೆ ವಜಾ ಮಾಡ್ತಿದ್ದೆವು, ಬಿಜೆಪಿಯವರು ಬಿಟ್ಟಿದ್ದಾರೆ ಎಂಬರ್ಥದಲ್ಲಿ ಹೇಳಿರಬಹುದು. ಸರ್ಕಾರ ವಜಾ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಆ ಮಾನಸಿಕತೆ ಬಿಜೆಪಿಗೆ ಇಲ್ಲ. ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಗೋಹತ್ಯೆ ನಿಷೇಧ ಕಾಯ್ದೆ ಬಿಲ್‌ಗೆ ಸಹಿ ಹಾಕಿಲ್ಲ. ಬಿಲ್ಲನ್ನು ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು. ರಿಸರ್ವೇಶನ್ ಬಿಲ್ಲನ್ನು ಗೆಹ್ಲೋಟ್ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅಂದು ಸ್ವಾಗತಿಸಿದ ನೀವು ಇಂದು ಈ ನಡೆಯನ್ನು ಸ್ವಾಗತಿಸಬೇಕಿತ್ತು ಎಂದು ಟಾಂಗ್ ಕೊಟ್ಟರು.
ಜಾತಿಗಣತಿ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಬಗ್ಗೆ ಮಾತನಾಡಿ, ಚರ್ಚಾ ಸಮರವಾಗಲಿ, ಎಲ್ಲರ ಅಭಿಪ್ರಾಯ ವ್ಯಕ್ತವಾಗಲಿ. ನ್ಯಾಯ ಸಮ್ಮತವಾದ ತೀರ್ಮಾನ ಹೊರಬರಲಿ. ನಮ್ಮ ಮನೆಯಲ್ಲಿ ಗಣತಿ ನಡೆದಿಲ್ಲ ಎಂದು ಬಹಳಷ್ಟು ಜನ ಹೇಳಿದ್ದಾರೆ. ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಸ್ಪಷ್ಟಪಡಿಸಬೇಕು, ಉತ್ತರಿಸಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಗಣತಿ ನಡೆದಿರುವುದು. ಎಲ್ಲಾ ಜಿಜ್ಞಾಸೆ ಮತ್ತು ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕು. ಜನ ನಮ್ಮನೆಗೆ ಸರ್ವೆಗೆ ಬಂದಿಲ್ಲ ಅಂತಾರೆ ಈ ವರದಿಯನ್ನು ಹೇಗೆ ಒಪ್ಪಿಕೊಳ್ಳುವುದು? ಕಾಂತರಾಜು ವರದಿಯಲ್ಲಿ ರಚನೆ ಆಗುವಾಗ ಆದ ಲೋಪಗಳೇನು? ಸಮೀಕ್ಷೆ ಮಾಡಿದ ವರದಿ ಕೊಟ್ಟವರ ಜವಾಬ್ದಾರಿಯೂ ಇದರ ಹಿಂದೆ. ನಮ್ಮನೆಯಲ್ಲಿ ಸರ್ವೆ ಆಗಿಲ್ಲ ಎಂದು ಜನ ಹೇಳುತ್ತಿದ್ದಾರೆ. ಉತ್ತರ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ತಿರಸ್ಕರಿಸಿ, ಮರು ಸರ್ವೆ ಮಾಡಿ ಎಂದು ನಾನು ಒತ್ತಾಯಿಸುತ್ತಿಲ್ಲ. ಜಾತಿ ಜನಗಣತಿಯ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಹಿಂದುಳಿದ ವರ್ಗ, ಕಟ್ಟ ಕಡೆ ವ್ಯಕ್ತಿ ಸಾಮಾಜಿಕ ಸಮಬಾಳಿಗೆ ನ್ಯಾಯಕ್ಕಾಗಿ ಜಾತಿಗಣತಿ ಬೇಕು. ಸರ್ಕಾರ ತನ್ನ ಆಂತರಿಕ ಸಮಸ್ಯೆಯಿಂದ ಮುಕ್ತ ಆಗಲು ಜನಗಣತಿಯನ್ನು ಬಳಸುತ್ತಿದೆ. ಜಾತಿ ಜನಗಣತಿಯನ್ನು ಸರ್ಕಾರ ಗುರಾಣಿಯಾಗಿ ಬಳಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು ಸರಿಯ ಬಗ್ಗೆ ಚರ್ಚೆಯಾಗಲಿ, ಸಮರ ನಡೆಯಲಿ. ಯಾವುದೇ ಸಮುದಾಯವನ್ನು ಹೆಚ್ಚು ಮಾಡಿ ಕಡಿಮೆ ಮಾಡಿದ್ದರೆ ಅದು ತಪ್ಪು. ಮನೆ ಮನೆಗೆ ಹೋಗದೆ ವರದಿ ಸಿದ್ಧಪಡಿಸದಿದ್ದರೆ ಅದು ತಪ್ಪು. ಒಂದು ಸಮುದಾಯವನ್ನು ಹೆಚ್ಚು ಮಾಡುವುದು ಮತ್ತೊಂದು ಸಮುದಾಯಕ್ಕೆ ಹಲವು ಉಪಜಾತಿ ತೋರಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ವಕ್ಫ್ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ