ಶಿವಮೊಗ್ಗ: ಪರಿಸರ ಕಾಳಜಿ, ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗ್ತಿದೆ. ಆದರೆ ಪರಿಸರ ಉಳಿಸಿ ಅನ್ನೋದನ್ನು ವೈಯಕ್ತಿಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರೋಫೆಸರ್ ಒಬ್ಬರು ಕ್ಯಾಂಪಸ್‍ಗೆ ಸೈಕಲ್‍ನಲ್ಲೇ ಬರ್ತಾರೆ. ಅಷ್ಟೇ ಅಲ್ಲ, ಪರಿಸರ ಸ್ನೇಹಿ ಚಟುವಟಿಕೆಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಶಿವಮೊಗ್ಗದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಲ್.ಕೆ.ಶ್ರೀಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶ್ರೀಪತಿ ಅವರು ದಿನವೂ ಸೈಕಲ್‍ನಲ್ಲೇ ಕಾಲೇಜಿಗೆ ಬರ್ತಾರೆ. 42 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‍ನಲ್ಲಿ 1 ಸಾವಿರಕ್ಕೂ ಹೆಚ್ಚು ಹೊಂಗೆ ಸಸಿ ನೆಟ್ಟು ಬೆಳೆಸಿದ್ದಾರೆ. ಇದಲ್ಲದೆ ಸೋಲಾರ್ ಕುಕ್ಕರ್, ಹ್ಯಾಂಡ್ ಪಂಪ್, ಸುಧಾರಿತ ಒಲೆಗಳು, ಕಿಚನ್ ವೆಸ್ಟ್ ಗ್ಯಾಸ್ ಪ್ಲಾಂಟ್, ಬಯೋ ಫಿಲ್ಟರ್, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಇತ್ಯಾದಿ ಘಟಕಗಳನ್ನು ನಿರ್ಮಾಣ ಮಾಡಿದ್ದಾರೆ. ಇವುಗಳಿಂದ ಇಡೀ ಕ್ಯಾಂಪಸ್‍ನಿಂದ ಒಂದೇ ಒಂದು ಚೂರು ತ್ಯಾಜ್ಯ ಹೊರ ಹೋಗುವುದಿಲ್ಲ.
2011 ರಿಂದ ಪ್ರತಿ ತಿಂಗಳು ಸುಮಾರು 400 ರಿಂದ 500 ಲೀಟರ್ ಬಯೋಡಿಸೆಲ್ ತಯಾರಿಸಿ ಇದೇ ಕಾಲೇಜಿನ ಬಸ್ಸುಗಳಿಗೆ ಬಳಸಲಾಗ್ತಿದೆ. ಕ್ಯಾಂಪಸ್‍ನಲ್ಲೇ ಜೇನು ಕೃಷಿ, ನರ್ಸರಿ ವೈವಿಧ್ಯಮಯ ಮರಗಿಡಗಳ ನಡುವೆ ಇವರ ಪಾಠ-ಪ್ರವಚನಗಳು ನಡೆಯುತ್ತವೆ. ಜೆಎನ್‍ಎನ್‍ಸಿ ಕ್ಯಾಂಪಸ್‍ಗೆ ಹಸಿರು ಹೊದಿಕೆ ಹೊದಿಸಿರುವ, ಪರಿಸರದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುವ ಶ್ರೀಪತಿ ನಮ್ಮ ನಡುವಿನ ಅಪರೂಪದ ಶಿಕ್ಷಕರಾಗಿದ್ದಾರೆ.
ದೇಶ-ವಿದೇಶಗಳಲ್ಲಿ ಅಪಾರ ಶಿಷ್ಯಬಳಗ ಹೊಂದಿರುವ ಶ್ರೀಪತಿ ಇಂದಿಗೂ ಮಲೆನಾಡಿನ ಯಾವುದೇ ರೀತಿಯ ಪರಿಸರ ಹೋರಾಟಗಳಲ್ಲಿ ಅಧಿಕೃತವಾಗಿ ಮಾತನಾಡ್ತಾರೆ ಅನ್ನೋದು ಹೆಮ್ಮೆಯ ವಿಷಯ.