ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು (Mehul Choksi) ಬೆಲ್ಜಿಯಂನ (Belgium) ಅಧಿಕಾರಿಗಳು ಬಂಧಿಸಿದ್ದಾರೆ. ಭಾರತದ ಕೇಂದ್ರೀಯ ತನಿಖಾ ಸಂಸ್ಥೆ (CBI) ಮತ್ತು ಜಾರಿ ನಿರ್ದೇಶನಾಲಯ (ED) ಮಾಡಿದ ಕೋರಿಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
65 ವರ್ಷದ ಮೆಹುಲ್ ಚೋಕ್ಸಿ, 2018ರಿಂದ ಭಾರತದಿಂದ ಪರಾರಿಯಾಗಿದ್ದರು. ಈ ವರ್ಷದ ಏ.12 ರಿಂದ ಬೆಲ್ಜಿಯಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ. ಚೋಕ್ಸಿ ಆರೋಗ್ಯ ಕಾರಣಗಳಿಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ತೆರಳಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಜಾತಿ ಸಮೀಕ್ಷೆ | 1 ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? – ಅಶೋಕ್ ಕಿಡಿ
ಭಾರತೀಯ ತನಿಖಾ ಸಂಸ್ಥೆಗಳು ಅವರ ವಿರುದ್ಧ ಜಾರಿಯಲ್ಲಿರುವ ಎರಡು ಬೇಲ್ ರಹಿತ ವಾರಂಟ್‌ಗಳನ್ನು ಆಧರಿಸಿ 2024ರ ಸೆಪ್ಟೆಂಬರ್‌ನಲ್ಲಿ ಬೆಲ್ಜಿಯಂ ಸರ್ಕಾರಕ್ಕೆ ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಮನವಿಯ ಆಧಾರದ ಮೇಲೆ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದೆ.
ಪ್ರಸ್ತುತ ಚೋಕ್ಸಿಯನ್ನು ಬೆಲ್ಜಿಯಂನ ಬಂಧನ ಕೇಂದ್ರದಲ್ಲಿ ಇರಿಸಲ್ಪಟ್ಟಿದ್ದು, ಕಳೆದ ಆರು ತಿಂಗಳಿನಿಂದ ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ಹೇಳಲಾಗುತ್ತಿದ್ದು, ಅವರು ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಚೋಕ್ಸಿಗೆ ಪೌರತ್ವ ಸಿಕ್ಕಿದ್ದು ಹೇಗೆ?
65 ವರ್ಷದ ಚೋಕ್ಸಿ 2023ರ ನವೆಂಬರ್ 15ರಿಂದ ಎಫ್-ರೆಸಿಡೆನ್ಸಿ ಪೌರತ್ವ ಕಾರ್ಡ್ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದರು. ಅವನ ಪತ್ನಿ ಬೆಲ್ಜಿಯಂನವರೇ ಆದ್ದರಿಂದ ಪೌರತ್ವ ಕಾರ್ಡ್ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
2024ರ ಸೆಪ್ಟೆಂಬರ್‌ನಲ್ಲಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಬೆಲ್ಜಿಯಂಗೆ ಮನವಿ ಮಾಡಿದ್ದವು. ಆದ್ರೆ ಅಂದು ಚೋಕ್ಸಿ ಪರ ವಕೀಲರು, ನನ್ನ ಕಕ್ಷಿಗಾರನ ಆರೋಗ್ಯ ಸರಿಯಿಲ್ಲ, ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಅಧಿಕಾರಿಗಳು, ಚೋಕ್ಸಿ ಭಾರತದಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಇಡಿ ಮತ್ತು ಸಿಬಿಐನಿಂದ ಹಸ್ತಾಂತರ ಕೋರಿಕೆಯ ಮೇರೆಗೆ ಬೆಲ್ಜಿಯಂ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ, ಪಿಎನ್‌ಬಿ ಬ್ಯಾಂಕ್‌ನ 13,500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆಯ ಆರೋಪದಲ್ಲಿದ್ದಾರೆ. ಚೋಕ್ಸಿಯ ಕಂಪನಿಯಾದ ಗೀತಾಂಜಲಿ ಜೆಮ್ಸ್, ಬ್ಯಾಂಕ್‌ನ ಕೆಲವು ಅಧಿಕಾರಿಗಳ ಸಹಕಾರದೊಂದಿಗೆ ಲೆಟರ್ ಆಫ್ ಅಂಡರ್‌ಟೇಕಿಂಗ್ (ಎಲ್‌ಒಯು) ಮತ್ತು ಫಾರಿನ್ ಲೆಟರ್ ಆಫ್ ಕ್ರೆಡಿಟ್ (ಎಫ್‌ಎಲ್‌ಸಿ)ಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡು ಈ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಈಗಾಗಲೇ ಹಲವು ಚಾರ್ಜ್ಶೀಟ್‌ಗಳನ್ನು ಸಲ್ಲಿಸಿವೆ.ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – ರಸ್ತೆಗಿಳಿಯಲ್ಲ 6 ಲಕ್ಷ ಲಾರಿಗಳು