ಬೆಂಗಳೂರು: ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಜಾತಿ ಜನಗಣತಿ ವರದಿ (Caste Census) ಸಂಬಂಧ ರಾಜ್ಯ ಬಿಜೆಪಿ (BJP) ಕಚೇರಿಯಲ್ಲಿ ಬಿವೈ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ವರದಿಯ ಕುರಿತು ಅನೌಪಚಾರಿಕ ಚರ್ಚೆ ನಡೆಸಲಾಯಿತು. ಸರ್ಕಾರದ ತೀರ್ಮಾನ ನೋಡಿಕೊಂಡು ಮುಂದುವರೆಯಲು ಬಿಜೆಪಿ ನಿರ್ಧರಿಸಿದೆ.ಇದನ್ನೂ ಓದಿ: ಪೀಣ್ಯಾದ ಚಿತಾಗಾರದಲ್ಲಿ ನೆರವೇರಿದ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ
ಸಭೆ ಬಳಿಕ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಮುಸ್ಲಿಮರ ಹಿಂದೆ ಟೋಪಿ ಹಾಕಿಕೊಂಡು ಯಾಕೆ ಬಿದ್ದಿದ್ದಾರೆ? ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? ಈ ಜಾತಿ ಜನಗಣತಿ ವರದಿ ವಿಚಾರದಲ್ಲಿ ಡಿಕೆಶಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿ, ಜಾತಿ ಜನಗಣತಿ ವರದಿ ಬಗ್ಗೆ ಸರ್ಕಾರ ಏನು ತೀರ್ಮಾನ ಮಾಡುತ್ತದೋ ಮಾಡಲಿ. ಸರ್ಕಾರ ತನ್ನ ನಿರ್ಧಾರ ಅಂತಿಮವಾಗಿ ತಿಳಿಸಿದ ನಂತರ ನಮ್ಮ ನಿಲುವು ನಾವು ತೆಗೆದುಕೊಳ್ಳುತ್ತೇವೆ. ಇದು ಹತ್ತು ವರ್ಷ ಹಳೆಯ ವರದಿ. ಇದು ಔಟ್ ಡೇಟೆಡ್ ವರದಿ, ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಲ್ಲಿಯೇ ವರದಿ ಬಗ್ಗೆ ಒಮ್ಮತಾಭಿಪ್ರಾಯ ಇಲ್ಲ. ಮುಸ್ಲಿಮರು ನಂಬರ್ 1 ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗಾದರೆ ಮುಸ್ಲಿಮರಿಗೆ ಯಾಕೆ ಬೇಕು ಅಲ್ಪಸಂಖ್ಯಾತರ ಮಾನ್ಯತೆ? ನಾವು ಒಟ್ಟಿಗೆ ಕೂತು ಪಕ್ಷದ ಅಭಿಪ್ರಾಯ ಏನಿರಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಏ. 15ರಿಂದ ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 2ರಲ್ಲಿ ವಿಮಾನಯಾನ ಸ್ಥಗಿತ