PNB Fraud Case | ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಅರೆಸ್ಟ್‌

Public TV
3 Min Read
Mehul Choksi 2

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ (Mehul Choksi)ಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ 13,850 ಕೋಟಿ ರೂ. ಸಾಲ ಪಡೆದಿದ್ದ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ, ಸಾಲ ಮರುಪಾವತಿಸದೇ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಇವರಿಬ್ಬರಿಗಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹುಡುಕಾಟ ನಡೆಸುತ್ತಿದೆ. ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಚೋಕ್ಸಿ ಅವರನ್ನು ಬೆಲ್ಜಿಯಂನಲ್ಲಿ ಶನಿವಾರ ಬಂಧಿಸಲಾಗಿದೆ. ಸದ್ಯ ಚೋಕ್ಸಿ ಜೈಲಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.

Mehul Choksi

2018ರಲ್ಲಿ ದೇಶದಿಂದ ಪರಾರಿಯಾಗಿದ್ದ ಚೋಕ್ಸಿ, ಆರಂಭದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು ಎಂದು ಹೇಳಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಬೆಲ್ಡಿಯಂ ಸರ್ಕಾರಕ್ಕೆ ಮನವಿ ಮಾಡಿತ್ತು. ಇನ್ನೂ ನೀರವ್‌ ಮೋದಿ ಗಡೀಪಾರು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಸದ್ಯ ಚೋಕ್ಸಿ ಬೆಲ್ಜಿಯಂ ಕೋರ್ಟ್‌ನಲ್ಲಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಮನವಿ ಮಾಡಬಹುದು. ಹೀಗಾಗಿ ಆರೋಪಿಯನ್ನ ಭಾರತಕ್ಕೆ ಕರೆತರಲು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾನೂನು ಹೋರಾಟ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

pnb 660 052218074928

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 13,850 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಪ್ರಮುಖವಾಗಿ ಬೇಕಾಗಿರುವ ಚೋಕ್ಸಿ ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ

1,271 ಕೋಟಿ ಮೌಲ್ಯದ ಆಸ್ತಿ ಜಪ್ತಿ
2018 ರಲ್ಲಿ ಇಡಿ 1,217 ಕೋಟಿ ಮೌಲ್ಯದ ಚೋಕ್ಸಿಯ 41 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಅವರ 2 ಫ್ಲಾಟ್‌ಗಳು, ಕೋಲ್ಕತ್ತಾದ ಮಾಲ್, ಮುಂಬೈ-ಗೋವಾ ಹೆದ್ದಾರಿಯಲ್ಲಿ 27 ಎಕ್ರೆ ಭೂಮಿ, ತಮಿಳುನಾಡಿನಲ್ಲಿ 101 ಎಕರೆ ಜಮೀನು, ಆಂಧ್ರಪ್ರದೇಶದ ನಾಸಿಕ್, ನಾಗ್ಪುರದಲ್ಲಿನ ಜಮೀನುಗಳು, ಅಲ್ಲಾಬಾಗ್‌ನಲ್ಲಿರುವ 2 ಬಂಗಲೆಗಳು ಮತ್ತು ಸೂರತ್‌ನಲ್ಲಿರುವ ಕಚೇರಿಯನ್ನು ಇಡಿ ವಶಪಡಿಸಿಕೊಂಡಿತ್ತು. ಈವರೆಗೆ ಇಡಿ ಚೋಕ್ಸಿ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿದೆ. 2019ರಲ್ಲಿ ಚೋಕ್ಸಿ ದೇಶದಿಂದ ಪರಾರಿಯಾಗಿದ್ದಾನೆ ಎಂದು ಹೇಳಿತ್ತು.

Mehul Choksi 2

ಚೋಕ್ಸಿಗೆ ಪೌರತ್ವ ಸಿಕ್ಕಿದ್ದು ಹೇಗೆ?
65 ವರ್ಷದ ಚೋಕ್ಸಿ 2023ರ ನವೆಂಬರ್‌ 15ರಿಂದ ʻಎಫ್‌- ರೆಸಿಡೆನ್ಸಿʼ ಪೌರತ್ವ ಕಾರ್ಡ್‌ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದ. ಅವನ ಪತ್ನಿ ಬೆಲ್ಜಿಯಂ ನವರೇ ಆದ್ದರಿಂದ ಪೌರತ್ವ ಕಾರ್ಡ್‌ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

Mehul Choksi 1

ಬ್ಲಡ್‌ಕ್ಯಾನ್ಸರ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಚೊಕ್ಸಿ
2024ರ ಸೆಪ್ಟೆಂಬರ್‌ನಲ್ಲಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಬೆಲ್ಜಿಯಂಗೆ ಮನವಿ ಮಾಡಿದ್ದವು. ಆದ್ರೆ ಅಂದು ಚೋಕ್ಸಿ ಪರ ವಕೀಲರು, ನನ್ನ ಕಕ್ಷಿಗಾರನ ಆರೋಗ್ಯ ಸರಿಯಿಲ್ಲ, ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಅಧಿಕಾರಿಗಳು, ಚೋಕ್ಸಿ ಭಾರತದಲ್ಲೂ ಚಿಕಿತ್ಸೆ ಪಡೆಯಬಹುದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಇಡಿ ಮತ್ತು ಸಿಬಿಐನಿಂದ ಹಸ್ತಾಂತರ ಕೋರಿಕೆಯ ಮೇರೆಗೆ ಬೆಲ್ಜಿಯಂ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Share This Article