– ತಹವ್ವೂರ್ ರಾಣಾಗೆ ಎನ್‌ಐಎ ಕೇಳಿದ ಆ 18 ಪ್ರಶ್ನೆಗಳು ಯಾವುವು?
– ಭಾರತ ಹಸ್ತಾಂತರ ತಡೆಯಲು 32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ ಪರ ವಕೀಲ
ನವದೆಹಲಿ: 2008ರ ಮುಂಬೈ ದಾಳಿ (Mumbai Attack) ಪ್ರಕರಣದ ಉಗ್ರ ತಹವ್ವೂರ್ ಹುಸೇನ್ ರಾಣಾ (Tahawwur Hussain Rana) ವಿಚಾರಣೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷ್ಯ ಕಲೆಹಾಕಲು ನಿಗೂಢ ಮಹಿಳೆಯ ಹಿಂದೆ ಬಿದ್ದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಣಾ ಭಾರತದಲ್ಲಿದ್ದ ವೇಳೆ ಆತನ ಜೊತೆಗಿದ್ದ ಮಹಿಳೆಯನ್ನು ಪತ್ತೆಹಚ್ಚಲು ಎನ್‌ಐಎ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಆಕೆಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಈ ಮಹಿಳೆ ರಾಣಾ ನಡೆಸಿದ ಪಿತೂರಿಯ ಭಾಗವಾಗಿರಬಹುದು ಅಥವಾ ರಾಣಾ ಸಂಪರ್ಕದ ಬಗ್ಗೆ ಪ್ರಮುಖ ಮಾಹಿತಿಯನ್ನೂ ಹೊಂದಿರಬಹುದು ಶಂಕಿಸಲಾಗಿದೆ. ಆ ಮಹಿಳೆ ರಾಣಾ ಭಾರತದಲ್ಲಿ ಇದ್ದಷ್ಟು ದಿನ ಅವನ ಪತ್ನಿ ಎಂದೇ ಹೇಳಿಕೊಂಡಿದ್ದಳು. ಈಕೆಯನ್ನ ಪತ್ತೆಹಚ್ಚಿದ್ರೆ, ಇನ್ನಷ್ಟು ರಹಸ್ಯಗಳನ್ನ ಬಯಲಿಗೆಳೆಯಬಹುದು ಎಂದು ಅಧಿಕಾರಿಗಳು ಮಹಿಳೆಯ ಹುಡುಕಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಣಾಗೆ 18ರ ಕಂಟಕ
ಈಗಾಗಲೇ ಮೊದಲ ಸುತ್ತಿನ ವಿಚಾರಣೆ ನಡೆಸಿರುವ ಎನ್‌ಐಎ ರಾಣಾಗೆ 18 ಪ್ರಮುಖ ಪ್ರಶ್ನೆಗಳನ್ನ ಕೇಳಿದೆ. ವಿಚಾರಣೆ ವೇಳೆ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಹಲವು ರಹಸ್ಯಗಳನ್ನ ಬಾಯ್ಬಿಟ್ಟಿದ್ದಾನೆ. ಈ ಪ್ರಶ್ನೆಗಳು ಮಾಧ್ಯಮಗಳಿಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎನ್‌ಐಎ ಕೇಳಿದ 18 ಪ್ರಶ್ನೆಗಳು ಯಾವುದು ಅಂತ ನೋಡೋದಾದ್ರೆ..
1. 2008ರ ನವೆಂಬರ್ 26ರಂದು ನೀವು ಎಲ್ಲಿದ್ರಿ?
2. ನೀವು ಭಾರತದಲ್ಲಿದ್ದ ಸಮಯದಲ್ಲಿ ಯಾರ‍್ಯಾರನ್ನ ಎಲ್ಲೆಲ್ಲಿ ಭೇಟಿ ಮಾಡಿದ್ದೀರಿ?
3. ಡೇವಿಡ್ ಕೋಲ್ಮನ್ ಹೆಡ್ಲಿ ನಿಮಗೆ ಎಷ್ಟು ದಿನಗಳಿಂದ ಗೊತ್ತು? ನಕಲಿ ವೀಸಾ ನೀಡಿ ಭಾರತಕ್ಕೆ ಕಳುಹಿಸಿದ್ದು ಏಕೆ?
4. ಹೆಡ್ಲಿಯನ್ನ ಭಾರತದಲ್ಲಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ನಿಮಗೆ ಏನು ಹೇಳಿದರು?
5. ಮುಂಬೈ ದಾಳಿಯಲ್ಲಿ ನಿಮ್ಮ ಮತ್ತು ಹೆಡ್ಲಿಯ ಪಾತ್ರವೇನು?
6. ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತೀಯ ವೀಸಾ ಪಡೆಯಲು ನೀವು ಹೇಗೆ ಸಹಾಯ ಮಾಡಿದ್ದೀರಿ?
7. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನಿಮಗೆ ಹೇಗೆ ಗೊತ್ತು? ನೀವು ಯಾವಾಗ ಮತ್ತು ಎಲ್ಲಿ ಅವನನ್ನ ಮೊದಲ ಬಾರಿಗೆ ಭೇಟಿ ಮಾಡಿದ್ರಿ?
8. ಹಫೀಜ್ ಸಯೀದ್ ಜೊತೆಗೆ ನಿಮ್ಮ ನಂಟೇನು?
9. ಲಷ್ಕರ್-ಎ-ತೈಬಾಗೆ ನೀವು ಹೇಗೆ ಸಹಾಯ ಮಾಡಿದ್ದೀರಿ? ನಿನ್ನ ಸಹಾಯಕ್ಕೆ ಪ್ರತಿಯಾಗಿ ಲಷ್ಕರ್ ನಿನಗೆ ಏನು ಕೊಟ್ಟನು?
10. ಲಷ್ಕರ್-ಎ-ತೊಯ್ಬಾದಲ್ಲಿ ಎಷ್ಟು ಜನರಿದ್ದಾರೆ? ಅದರ ರಚನೆ ಹೇಗಿದೆ? ನೇಮಕಾತಿ ಹೇಗೆ ನಡೆಯುತ್ತದೆ? ಯಾರು ಮಾಡುತ್ತಾರೆ?
11. ಲಷ್ಕರ್ ನಡೆಸಲು ನಿಧಿ ಎಲ್ಲಿಂದ ಬರುತ್ತದೆ? ಹೆಚ್ಚು ನಿಧಿ ಸಂಗ್ರಹ ಮಾಡುವವರು ಯಾರು?
12. ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಾರೆ? ನೀವು ಯಾವ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತೀರಿ?
13. ಪಾಕಿಸ್ತಾನಿ ಸೇನೆ ಮತ್ತು ISI ನಿಮಗೆ ಹೇಗೆ ಸಹಾಯ ಮಾಡುತ್ತದೆ?
14. ದಾಳಿ ಮಾಡಲು ನೀವು ಗುರಿಗಳನ್ನು ಹೇಗೆ ಆರಿಸುತ್ತೀರಿ? ಗುರಿಯ ಮೇಲೆ ದಾಳಿ ಮಾಡಲು ISI ನಿಮಗೆ ಸೂಚನೆಗಳನ್ನು ನೀಡುತ್ತದೆಯೇ?
15. ISIಯ ಯೋಜನೆ ಏನು? ಭಾರತದ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗಲಿಲ್ಲವೇ?
16. ಐಎಸ್‌ಐ ಹೊರತಾಗಿ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕ ದಾಳಿಯ ಮಾಹಿತಿ ಸಿಗುತ್ತದೆಯೇ?
17. ದಾಳಿಯ ಸಮಯದಲ್ಲಿ ಭಯೋತ್ಪಾದಕರಿಗೆ ಯಾರು ಸೂಚನೆಗಳನ್ನು ನೀಡುತ್ತಾರೆ?
18. ಆತ್ಮಹತ್ಯಾ ದಾಳಿಗಳಿಗೆ ಹುಡುಗರನ್ನು ಹೇಗೆ ಸಿದ್ಧಪಡಿಸ್ತಾರೆ, ಅವರಿಗೆ ಏನು ಉಪದೇಶ ಕೊಡ್ತಾರೆ?
32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ:
ಇನ್ನೂ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ್ದ ಅನ್ನೋ ಹೊಸ ವಿಚಾರ ಸಹ ಬೆಳಕಿಗೆ ಬಂದಿದೆ. ಈ ಮಾಹಿತಿಯು ಅಮೆರಿಕ ತನಿಖಾ ಏಜೆನ್ಸಿಗಳಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಣಾನನ್ನ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಪರ ವಕೀಲ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ 32 ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ತನ್ನ ಕಕ್ಷಿಗಾರನಿಗೆ ಭಾರತದ ಜೈಲುಗಳಲ್ಲಿ ಚಿತ್ರಹಿಂಸೆ ನೀಡಬಹುದು, ಇದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರಾಣಾ ಜೀವನ ಬೇಗ ಅಂತ್ಯವಾಗಲಿದೆ. ಆದ್ದರಿಂದ ಭಾರತಕ್ಕೆ ಹಸ್ತಾಂತರಿಸದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.