ಸಾಮಾನ್ಯವಾಗಿ ಚಿಕನ್ ಮಾಡುವಾಗ ಚಿಕನ್ ಬಿರಿಯಾನಿ, ಚಿಕನ್ ಲಾಲಿಪಾಪ್, ಚಿಕನ್ 65 ಹೀಗೆ ಇನ್ನಿತರ ಪದಾರ್ಥಗಳನ್ನು ತಯಾರಿಸುತ್ತಾರೆ. ಆದರೆ ನಾನ್ ವೆಜ್ ತಿನ್ನುವ ಎಲ್ಲರೂ ವಿಭಿನ್ನವಾದ ಹಾಗೂ ವಿಧವಿಧವಾದ ತಿಂಡಿಗಳನ್ನು ತಯಾರಿಸಬೇಕೆಂದುಕೊಳ್ಳುತ್ತಾರೆ. ಹೀಗಿರುವಾಗ ಚಿಕನ್ ಅನ್ನು ವಿಭಿನ್ನವಾಗಿ ಒಂದು ಸ್ನ್ಯಾಕ್ಸ್ ರೀತಿಯಲ್ಲಿ ಮಾಡುವ ಚಿಕನ್ ಕ್ಯಾಂಡಿ ಇಲ್ಲಿದೆ.
ಚಿಕನ್ ಕ್ಯಾಂಡಿ ಮಾಡಲು ಬೇಕಾಗುವ ಸಾಮಗ್ರಿಗಳು:
ಚಿಕನ್
ಬ್ರೆಡ್ ಸ್ಲೈಸ್
ಮೈದಾ ಹಿಟ್ಟು
ಉಪ್ಪು
ಕೆಂಪು ಖಾರದ ಪುಡಿ
ಕರಿಮೆಣಸು ಹಾಗೂ ಬಿಳಿ ಮೆಣಸಿನ ಪುಡಿ
ಬೆಳ್ಳುಳ್ಳಿ ಪುಡಿ
ಐಸ್ ಕ್ರೀಮ್ ಕ್ಯಾಂಡಿ ಸ್ಟಿಕ್ಸ್
ಆರಿಗ್ಯಾನೋ
ಮಾಡುವ ವಿಧಾನ:
ಮೊದಲಿಗೆ ಯಾವುದಾದರೂ ವೃತ್ತಾಕಾರದ ತಟ್ಟೆಯನ್ನು ತೆಗೆದುಕೊಂಡು ಬ್ರೆಡ್ ಅನ್ನು ವೃತ್ತಾಕಾರದಲ್ಲಿ ಕಟ್ ಮಾಡಿಕೊಳ್ಳಬೇಕು. ಬಳಿಕ ಬ್ರೆಡ್‌ನ ಉಳಿದ ಭಾಗವನ್ನು ಮಿಕ್ಸರ್‌ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು. ಅದಾದ ನಂತರ ಒಂದು ಪಾತ್ರೆಗೆ ಮೈದಾ ಹಿಟ್ಟು, ಉಪ್ಪು, ಖಾರದಪುಡಿ ಸೇರಿಸಿ, ನೀರು ಹಾಕಿ ಕಲಸಿ ಇಟ್ಟುಕೊಳ್ಳಬೇಕು.
ಇನ್ನೂ ಚಿಕನ್ ಅನ್ನು ಚಾಕುವಿನಿಂದ ಸಣ್ಣದಾಗಿ ಕತ್ತರಿಸಿ, ಖೀಮಾ ರೀತಿಯಲ್ಲಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಉಪ್ಪು, ಕರಿಮೆಣಸಿನ ಪುಡಿ ಹಾಗೂ ಬಿಳಿ ಮೆಣಸಿನ ಪುಡಿ, ಬೆಳ್ಳುಳ್ಳಿಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡಿರುವುದನ್ನು ಹಾಕಬೇಕು. ಬಳಿಕಆರಿಗ್ಯಾನೋ ಹಾಕಿ, ಇದೆಲ್ಲವನ್ನು ಸರಿಯಾಗಿ ಕಲಸಿಕೊಳ್ಳಬೇಕು.
ವೃತ್ತದ ಆಕಾರಕ್ಕೆ ಕತ್ತರಿಸಿ ಇಟ್ಟುಕೊಂಡಂತಹ ಬ್ರೆಡ್ ಅನ್ನು ತೆಗೆದುಕೊಳ್ಳಬೇಕು. ಬ್ರೆಡ್‌ನ ಒಂದು ಭಾಗಕ್ಕೆ ಕಲಸಿಟ್ಟ ಚಿಕನ್ ಮಿಶ್ರಣವನ್ನು ಇಟ್ಟು ಅದರೊಳಗೆ ಐಸ್ ಕ್ರೀಮ್ ಕ್ಯಾಂಡಿಯ ಸ್ಟಿಕ್ ಅನ್ನು ಇಡಬೇಕು. ಬಳಿಕ ಅದರ ಮೇಲೆ ಇನ್ನೊಂದು ಬ್ರೆಡ್‌ಗೆ ಮತ್ತೆ ಚಿಕನ್ ಮಿಶ್ರಣ ಹಾಕಿ, ಅದರ ಮೇಲೆ ಅಂಟಿಸಿಕೊಳ್ಳಬೇಕು. ಬಳಿಕ ಕಲಸಿಟ್ಟುಕೊಂಡಂತಹ ಮೈದಾ ಹಿಟ್ಟಿನ ಮಿಶ್ರಣದಲ್ಲಿ ಈ ಬ್ರೆಡ್ ಅನ್ನು ಅದ್ದಬೇಕು. ನಂತರ ಅದನ್ನು ಬ್ರೆಡ್‌ನ ಪುಡಿ ಮಿಶ್ರಣದಲ್ಲಿ ಅದ್ದಿ, ಸಂಪೂರ್ಣವಾಗಿ ಬ್ರೆಡ್‌ಗೆ ಮೆತ್ತಿಸಬೇಕು. ಕಾದ ಎಣ್ಣೆಗೆ ಬ್ರೆಡ್ ಅನ್ನು ಬಿಟ್ಟು ಚೆನ್ನಾಗಿ ಕರಿದುಕೊಳ್ಳಬೇಕು.
ಆಗ ಗರಿಗರಿಯಾದ ಚಿಕನ್ ಕ್ಯಾಂಡಿ ತಯಾರಾಗುತ್ತದೆ. ಚಿಕನ್ ಕ್ಯಾಂಡಿಯನ್ನು ಸಾಸ್ ಅಥವಾ ಮಯೋನಿಸ್‌ನೊಂದಿಗೆ ಸವಿಯಬಹುದು. ಇದನ್ನು ಮಕ್ಕಳಿಗೆ ಸ್ನ್ಯಾಕ್ಸ್ ರೀತಿಯಲ್ಲಿ ಅಥವಾ ನೀವು ಇದನ್ನು ಹಲವು ದಿನಗಳ ಕಾಲ ಫ್ರಿಜ್‌ನಲ್ಲಿಟ್ಟು ಸೇವಿಸಬಹುದಾಗಿದೆ.