Exclusive |  ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

Public TV
3 Min Read
jayaprakash hegde caste census report siddaramaiah

ಬೆಂಗಳೂರು: ಪರ, ವಿರೋಧದ ಚರ್ಚೆ ನಡುವೆಯೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿವಾರು ಜನಗಣತಿ) ವರದಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮಂಡನೆಯಾಗುವ ಸಾಧ್ಯತೆಯಿದೆ.

ತಳ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಸಮಾಜದವರು ಜಾತಿ ಗಣತಿ ವರದಿ ಸ್ವೀಕಾರ ಮತ್ತು ಜಾರಿ ಮಾಡುವಂತೆ ಆಗ್ರಹಿಸುತ್ತಿದ್ದರೆ ಮೇಲ್ವರ್ಗದ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕವಾಗಿದ್ದು ವರದಿ ಸ್ವೀಕರಿಸದಂತೆ ಒತ್ತಾಯಿಸುತ್ತಿವೆ. ಹಾಗಾಗಿ ಜಾತಿ ಗಣತಿ ವರದಿ ಬಗ್ಗೆ ಸರ್ಕಾರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮುಂದೂಡುತ್ತಲೇ ಬಂದಿದ್ದವು.

ಸಿದ್ದರಾಮಯ್ಯ (Siddaramaiah) ಸರ್ಕಾರ ರಚನೆಯಾದ ನಂತರ ಹಲವು ಬಾರಿ ಕ್ಯಾಬಿನೆಟ್‌ ಸಭೆಯಲ್ಲಿ ಈ ವರದಿ ಮಂಡನೆಯಾಗಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಆದರೆ ಈಗ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಂಡನೆಯಾದರೆ ಕರ್ನಾಟಕ ರಾಜಕಾರಣದಲ್ಲಿ (Karnataka Politics) ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

Congress Cabinet Meeting

 

ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆ ಅಡಿ ಕ್ಯಾಬಿನೆಟ್ ಅಜೆಂಡಾದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ವರದಿಯನ್ನು ಮಂಡಿಸಿ ಚರ್ಚೆ ನಡೆಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿದ್ದಾರೆ. ಮಂಡನೆಯಾದ ಬಳಿಕ ಜಾತಿಗಣತಿ ವರದಿ ಅಂಗೀಕಾರವೋ? ಅಥವಾ ಸಂಪುಟ ಉಪಸಮಿತಿ ರಚನೆಯೋ ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಗಲಿದ್ದು ಸಿದ್ದರಾಮಯ್ಯನವರ ಕ್ಯಾಬಿನೆಟ್ ನಡೆ ಕುತೂಹಲ ಮೂಡಿಸಿದೆ.

ಕಳೆದ ವರ್ಷದ ಫೆಬ್ರವರಿ 14ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಒಂದು ವರ್ಷದಿಂದಲೂ ವರದಿಯನ್ನು ಮುಟ್ಟದೇ ರಾಜ್ಯ ಸರ್ಕಾರ ಸುಮ್ಮನಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ಗೆ ವರದಿ ತರಲು ಹಿಂದೇಟು ಹಾಕಿತ್ತು. ಆದರೆ ಈಗ ಕ್ಯಾಬಿನೆಟ್ ಮುಂದೆ ವರದಿ ಇಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

ಜಾತಿ ಗಣತಿ ಉದ್ದೇಶ ಏನು?
1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.

Cabinet

ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್‌. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕಳೆದ ವರ್ಷ ಕೆ. ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತ್ತು.

Share This Article